Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 24, 2025 at 02:48 PM
*ಶಿವ ಮಯವಾದ ಗೋಕುಲ* :- ಕೃಷ್ಣ ಜನಿಸುವಾಗ ಶಿವನು ಸಮಾಧಿ ಸ್ಥಿತಿಯಲ್ಲಿದ್ದನು. ಎಚ್ಚರವಾದ ಮೇಲೆ ಗೋಕುಲದಲ್ಲಿ ಕೃಷ್ಣನು ಬಾಲ ಕೃಷ್ಣನ ರೂಪದಲ್ಲಿರುವುದು ತಿಳಿಯಿತು. ಬಾಲಕೃಷ್ಣ ನನ್ನು ನೋಡಬೇಕೆಂದು ಶಿವನಿಗೆ ಆಸೆಯಾಯಿತು. ಕೂಡಲೇ ಯೋಗಿಯ ರೂಪ ಧರಿಸಿ ತನ್ನ ಗಣಗಳಾದ ನಂದಿ ಬೃಂಗಿಯರನ್ನೇ ಶಿಷ್ಯ ರನ್ನಾಗಿ ಮಾಡಿಕೊಂಡು 'ಜೈ ಅಲಕ್ ನಿರಂಜನ್' ಎಂದು ಹೇಳುತ್ತಾ ಗೋಕುಲಕ್ಕೆ ಬಂದನು. ಗೋಕುಲದ ನಂದ ಭವನದ ಮುಖ್ಯದ್ವಾರದ ಮುಂದೆ ನಿಂತು 'ಜೈ ಅಲಕ್ ನಿರಂಜನ್' ಎಂದು ಹೇಳಿದಾಗ ಆ ಭವನದಲ್ಲಿನ ದಾಸಿ ಒಬ್ಬಳು ಭಿಕ್ಷೆಯನ್ನು ತಂದು ಯೋಗಿಯ ಮುಂದೆ ಹಿಡಿದು ನೀವು ಇದನ್ನು ಸ್ವೀಕರಿಸಿ ಬಾಲ ಕೃಷ್ಣನಿಗೆ ಆಶೀರ್ವಾದ ಮಾಡಬೇಕೆಂದು ಯಶೋದ ತಾಯಿ ತಿಳಿಸಿದ್ದಾರೆ ಎಂದಳು. ಶಿವನು ಹೇಳಿದ ನಾನು ಭಿಕ್ಷೆಯನ್ನು ಸ್ವೀಕರಿಸಲು ಬಂದಿಲ್ಲ. ಗೋಕುಲದಲ್ಲಿ ಯಶೋದಾ ನಂದರ ಮನೆಯಲ್ಲಿ ಬಾಲಕನು ಜನಿಸಿದ್ದಾನೆ. ಆ ಮಗುವನ್ನು ನೋಡಲು ಬಂದಿದ್ದೇನೆ ಎಂದನು. ದಾಸಿಯು ಒಳಗೆ ಹೋಗಿ ಯಶೋದ ತಾಯಿಗೆ ಈ ಮಾತನ್ನು ಹೇಳಿದಳು ಯಶೋದೆಗೆ ಇದನ್ನು ಕೇಳಿ ಆಶ್ಚರ್ಯವಾಗಿ ಬಂದವರು ಯಾರಿರಬಹುದು ಎಂದು ಒಳಗಿನ ಕಿಟಕಿಯಿಂದ ಹೊರಗೆ ಬಾಗಿಲಲ್ಲಿ ನಿಂತಿದ್ದ ಯೋಗಿಯನ್ನು ನೋಡಿದಳು. ಬಹಳ ಎತ್ತರವಾಗಿದ್ದ ಯೋಗಿ ವ್ಯಾಘ್ರ ಚರ್ಮ ಧರಿಸಿದ್ದಾನೆ, ಕೈಯಲ್ಲಿ ತ್ರಿಶೂಲ ಹಿಡಿದಿದ್ದಾನೆ, ತಲೆಯಲ್ಲಿ ದೊಡ್ಡ ಜಟೆ ಇದೆ. ಕೊರಳಲ್ಲಿ ಸರ್ಪ ಸುತ್ತಿಕೊಂಡಿದ್ದಾನೆ. ಅವಳಿಗೆ ಸ್ವಲ್ಪ ಭಯವಾಯಿತು. ಕೂಡಲೇ ಹೊರಗೆ ಬಂದು ಸಾಧುಗೆ ಭಕ್ತಿಯಿಂದ ನಮಸ್ಕರಿಸಿ, ಸ್ವಾಮಿ ನನ್ನ ಕಂದನನ್ನು ತಂದು ನಿಮಗೆ ತೋರಿಸುವುದಿಲ್ಲ ಏಕೆಂದರೆ, ನಿಮ್ಮ ಕುತ್ತಿಗೆ ಯಲ್ಲಿರುವ ದೊಡ್ಡ ಸರ್ಪವನ್ನು ನೋಡಿ ನನ್ನ ಕಂದ ಹೆದರುತ್ತಾನೆ. ಇದನ್ನು ಕೇಳಿ ನಗುತ್ತಾ ಶಿವನು ಹೇಳಿದನು. ಮಾತೆ ನೀನು ಚಿಂತಿಸದಿರು ನಿನ್ನ ಮುದ್ದು ಲಲ್ಲಾನು ಹೆದರುವುದಿಲ್ಲ ಏಕೆಂದರೆ ಅವನು ಕಾಲನಿಗೆ ಕಾಲ, ಬ್ರಹ್ಮನಿಗೆ ಬ್ರಹ್ಮ ಅವನು ಯಾರಿಗೂ ಹೆದರುವುದಿಲ್ಲ. ಯಾರ ದೃಷ್ಟಿಯೂ ಅವನಿಗೆ ತಾಕುವುದಿಲ್ಲ. ನಾನು ಯಾರೆಂದು ಅವನಿಗೆ ಗೊತ್ತು ನಮ್ಮಿಬ್ಬರದು ಜನ್ಮ ಜನ್ಮಾಂತರದ ಸಂಬಂಧ ನನ್ನನ್ನು ನೋಡಿದರೆ ಸಂತೋಷ ಪಡುತ್ತಾನೆ. ಈಗ ನಾನು ನಿನ್ನ ಕಂದನನ್ನು ಕಣ್ತುಂಬ ನೋಡಲು ಬಂದಿರುವೆ ನೀನು ತಂದು ತೋರಿಸುವುದಿಲ್ಲ ಎಂದರೆ ಅವನನ್ನು ನೋಡದ ಹೊರತು ನಾನು ಇಲ್ಲಿಂದ ಹೋಗುವುದಿಲ್ಲ, ಒಂದು ಹನಿ ನೀರನ್ನೂ ಕುಡಿಯುವುದಿಲ್ಲ ಹಾಗೆ ಇಲ್ಲಿಯೇ ಸಮಾಧಿ ಸ್ಥಿತಿಯಲ್ಲಿ ಕುಳಿತಿರುವೆ ಎಂದು ಗೋಕುಲದಲ್ಲಿದ್ದ ಮಹಾದೇವನ ಮಂದಿರದ ಮುಂದೆ ಬಾಲಕೃಷ್ಣನನ್ನು ನೋಡಲು ಕಾದು ಕುಳಿತನು. ಇತ್ತ ಒಳಗಡೆ ಸ್ವಲ್ಪ ಹೊತ್ತಿಗೆ ಕೃಷ್ಣನು ಜೋರಾಗಿ ಅಳಲು ಶುರು ಮಾಡಿದ. ತಾಯಿ ಯಶೋದೆ ತನ್ನ ಮಡಿಲಲ್ಲಿ ಹಾಕಿಕೊಂಡು ಹಾಲು ಕುಡಿಸಿದಳು. ಗಿಲಕಿಯನ್ನು ಶಬ್ದ ಮಾಡಿದಳು, ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೂಗಿ ದಳು. ತೊಟ್ಟಿಲಿಗೆ ಕಟ್ಟಿದ್ದ ಗಿಳಿಗಳನ್ನು ಅತ್ತ ಇತ್ತ ತಿರುಗಿಸಿದಳು. ಆದರೆ ಯಶೋದನ ಕಂದ ಹಠ ನಿಲ್ಲಿಸಲಿಲ್ಲ ಇನ್ನೂ ಜೋರಾಗಿ ಅಳಲು ಶುರು ಮಾಡಿದನು. ಇವನ ಅಳು ಕೇಳಿ ನೆರೆಯವರೆಲ್ಲ ಸೇರಿದರು. ಅಲ್ಲಿಗೆ ಬಂದ ದಾಸಿ ಯಶೋದೆಗೆ ಬೆಳಗ್ಗೆ ಬಂದ ಸಾಧುವು ಇವನ ಮೇಲೆ ಯಾವುದೋ ಪ್ರಯೋಗ ಮಾಡಿರಬೇಕು ಅದಕ್ಕೋಸ್ಕರ ನಲ್ಲ ಅಳುತ್ತಿದ್ದಾನೆ ಎಂದಳು. ಹೆದರಿ ನಡುಗಿದ ಯಶೋಧ ತನ್ನ ಮಗುವಿಗೆ ದೃಷ್ಟಿ ತಾಕಿದೆ ಪರಿಹಾರ ಮಾಡಬೇಕೆಂದು ಹತ್ತಿರದಲ್ಲಿದ್ದ ಶಾಂಡಿಲ್ಯ ಮಹರ್ಷಿಗಳನ್ನು ಕರೆಸಿದಳು. ಮಹರ್ಷಿಗಳು ಬಂದು ಕಣ್ಮುಚ್ಚಿ ಧ್ಯಾನಿಸಿ ಗಮನಿಸಿದರು. ಬಾಲಕೃಷ್ಣನ ದರ್ಶನ ಮಾಡಲು ಭಗವಂತ ಮಹಾಶಿವನು ಧರೆಗಿಳಿದು ಬಂದಿದ್ದಾನೆ ಎಂಬುದು ತಿಳಿಯಿತು. ಕೊಡಲೆ ಯಶೋದೆಯನ್ನು ಕರೆದು ಹೇಳಿದರು. ಹೊರಗಡೆ ಕಾಯುತ್ತಾ ಕುಳಿತಿರುವ ಸಾಧುಗಳಿಗೆ ನಿನ್ನ ಕಂದನ ಸ್ಪರ್ಶ ಮತ್ತು ದರ್ಶನ ಮಾಡಿಸು ಇವರಿಬ್ಬರದು ಜನ್ಮಾಂತರದ ಸಂಬಂಧವಿದೆ ಎಂದು ಯಶೋದೆಗೆ ಹೇಳಿದರು.‌ ಯಶೋದೆ ತನ್ನ ತೊಟ್ಟಿಲ ಕಂದನನ್ನು ಎತ್ತಿಕೊಂಡು ಚೆನ್ನಾಗಿ ಅಲಂಕರಿಸಿದಳು. ಪೀತಾಂಭರ ಉಡಿಸಿದಳು, ಕಾಲಿಗೆ ಗೆಜ್ಜೆ- ಕಾಲ ಬಳೆ -ಸೊಂಟಕ್ಕೆ ಉಡದಾರ- ಕೈಗೆ ಬಳೆ- ಕುತ್ತಿಗೆಗೆ ಹಾರ ಎಲ್ಲವನ್ನು ಹಾಕಿದಳು- ತಿಲಕ ಇಟ್ಟಳು- ಕೂದಲನ್ನು ಸೇರಿಸಿ ಜುಟ್ಟು ಕಟ್ಟಿ ದಂಡೆ ಮುಡಿಸಿದಳು. ಕಡೆಯದಾಗಿ ಕೆನ್ನೆ ಮೇಲೆ ದೃಷ್ಟಿ ಬೊಟ್ಟು ಇಟ್ಟಳು. ಕೈಯಿಂದ ನಿವಾಳಿಸಿ ಲೆಟಿಕೆ ತೆಗೆದಳು. ನಂತರ ಶಿವನನ್ನು ಒಳಗೆ ಕರೆದು ಕೃಷ್ಣನನ್ನು ತೋರಿಸಿದಳು. ಕೃಷ್ಣ ಮತ್ತು ಶಿವನ ದೃಷ್ಟಿ ಒಂದುಗೂಡಿದಾಗ ಕೃಷ್ಣನು ಅಳುವನ್ನು ನಿಲ್ಲಿಸಿ ಜೋರಾಗಿ ನಗಲು ಪ್ರಾರಂಭಿಸಿದ. ಬಾಲಕೃಷ್ಣ ಶಿವನನ್ನು ನೋಡಿ ಆನಂದದಿಂದ ಅವನ ಕೈ ಮೇಲೆ ಎಗರಿ ಎಗರಿ ಹಾರುತ್ತಿದ್ದ. ಹೀಗೆ ನಗುತ್ತಾ ಆಡುವ ತನ್ನ ಕಂದನನ್ನು ನೋಡಿ ಯಶೋದೆಗೆ ಸಮಾಧಾನವಾಯಿ ತು . ಅವಳು ಶಿವನಿಗೆ ನಮಸ್ಕರಿಸಿ ತನ್ನ ಕಂದನನ್ನು ಶಿವನ ಕೈಗೆ ಕೊಟ್ಟು ನನ್ನ ಕಂದನಿಗೆ ಯಾರ ದೃಷ್ಟಿಯು ತಾಗದಂತೆ ಆಶೀರ್ವದಿಸಿ ಎಂದಳು. ಯೋಗಿ ರೂಪದಿಂದ ಬಂದ ಶಿವ ಬಾಲಕೃಷ್ಣನನ್ನು ಹರಸಿದನು. ಮುದ್ದಾದ ಮಗುವನ್ನು ಕೈಯಲ್ಲಿ ಎತ್ತಿಕೊಂಡ ಶಿವನು ನಂದನ ಮನೆಯ ಮುಂದಿನ ಅಂಗಳದಲ್ಲಿ ಕುಣಿಯಲು ಪ್ರಾರಂಭಿಸಿದ ಕುಣಿಯುತ್ತ ಕುಣಿಯುತ್ತ ನರ್ತನ ಜೋರಾಯಿತು ಅದೆಂಥ ಕುಣಿತ ಮನೆಯವರೆಲ್ಲ ಬೆರಗಾಗಿ ನೋಡುತ್ತಿದ್ದರು. ನಭೋ ಮಂಡಲದಲ್ಲಿ ದೇವಾನುದೇವತೆಗಳು ನಿಂತು ಈ ದೃಶ್ಯವನ್ನು ಕಣ್ತುಂಬ ನೋಡಿ ಆನಂದಿಸಿದರು. ಬಾಲಕೃಷ್ಣನ ಎತ್ತಿಕೊಂಡು ಆನಂದದಿಂದ ಕುಣಿಯುತ್ತಿದ್ದ ಶಿವನ ನೃತ್ಯವನ್ನು ನೋಡಲು ಊರಿಗೆ ಊರೇ ನೆರೆಯಿತು. ಪೂರ್ತಿ ನಂದಗೋಕುಲ ಶಿವ ಮಯದಿಂದ ತುಂಬಿ ಹೋಯಿತು. ಆಗಿನ ಕಾಲದಲ್ಲಿ ನಂದನ ಊರು ಬೆಟ್ಟದ ತಪ್ಪಲಲ್ಲಿತ್ತು. ಈಗ ಆ ಬೆಟ್ಟವನ್ನು ಕೆಳಗೆ ನಿಂತು ಎತ್ತರಕ್ಕೆ ನೋಡಿದರೆ ಬೆಟ್ಟವು ಸಮಾಧಿ ಸ್ಥಿತಿಯಲ್ಲಿ ಕುಳಿ ತಿರುವ ಶಿವನ ಆಕೃತಿಯಂತೆ ಕಾಣುತ್ತದೆ. (ಇಡೀ ಬೆಟ್ಟವೇ ಶಿವನಂತಿದೆ) ಯೋಗಿಯಾಗಿ ಬಂದ ಶಿವನು ಬಾಲಕೃಷ್ಣನನ್ನು ನೋಡಿ ಯೋಗೀಶ್ವರನಾಗಿ ಕೃಷ್ಣನನ್ನು ದ್ಯಾನಿಸಿದನು. ಯೋಗೇಶ್ವರನಾದ ಕೃಷ್ಣನು ಶಿವನಿಗೆ ಹೇಳಿದ ನನಗೆ ನಿಮಗಿಂತ ಪ್ರಿಯರಾದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಪರಮೇಶ್ವರ ನೀವು ನನಗೆ ಎಷ್ಟು ಪ್ರಿಯರೆಂದರೆ ನನ್ನ ಆತ್ಮಕ್ಕಿಂತಲೂ ನೀವೇ ಹೆಚ್ಚು ಎಂದು ಕೃಷ್ಣ ಆನಂದದಿಂದ ಹೇಳಿ ಶಿವನಿಗೆ ನಮಸ್ಕರಿಸಿದನು. ವಸುದೇವಸುತಂ ದೇವಂ ಕಂಸ ಚಾಣೂರ ಮರ್ಧನಂ ! ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ !! ವಸದೇವನ ಮಗನಾದ ಸದಾ ದೇವಕಿಗೆ ಪರಮಾನಂದವನ್ನು ಕೊಡುವ, ಕಂಸ ಚಾಣೂರರನ್ನು ನಾಶ ಮಾಡಿದ ಜಗತ್ತಿನ ಗುರುವಾದ ಕೃಷ್ಣನಿಗೆ ನಮಿಸುವೆನು. ಗೋಪಿಕಾನಾಂ ಕುಚದ್ವಂದ್ವ ಕುಂಕುಮಾಂಕಿತ ವಕ್ಷಸಂ ! ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗದ್ಗುರುಂ !! ಗೋಪಿಕೆಯರಿಗೆ ಪ್ರಿಯನಾದ, ಹೃದಯ ಭಾಗದಲ್ಲಿ ಕುಂಕುಮದ ಗುರುತಿರುವ, ಎಲ್ಲಾ ಸೌಭಾಗ್ಯಗಳಿಗೂ ಕಾರಣನಾದ, ಜಗತ್ತಿನ ಗುರುವಾದ ಕೃಷ್ಣನಿಗೆ ನಮಿಸುವೆನು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ.
🙏 4

Comments