Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
                                
                            
                            
                    
                                
                                
                                March 1, 2025 at 12:50 AM
                               
                            
                        
                            *ಹರಿದಾಸ ಹೃದಯ*
*ಫಾಲ್ಗುಣ ಶುದ್ಧ ಬಿದಿಗೆ*
*ಬೇಕುಗಳ ಪಟ್ಟಿ*
ಮನುಷ್ಯನಾಗಿ ಹುಟ್ಟಿಬಂದ ಜೀವಿಗೆ ಇರಬೇಕಾದ, ಮಾಡಬೇಕಾದ, ನಡೆಯಬೇಕಾದ ಗುಣಗಳನ್ನು ಸುಂದರವಾಗಿ ಸಂಗ್ರಹಿಸಿ ಶ್ರೀವ್ಯಾಸರಾಜರು ಪಟ್ಟಿಮಾಡಿ ನಮ್ಮ ಮುಂದಿಟ್ಟಿದ್ದು ಹೀಗಿದೆ -
*ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ll ಪ ll*
*ಭೂತದಯಾಪರನಾಗಿರಬೇಕು*
*ಪಾತಕವೆಲ್ಲಾ ಕಳೆಯಲು ಬೇಕು*
*ಮಾತು ಮಾತಿಗೆ ಹರಿಯೆನ ಬೇಕು ll 1 ll*
*ಶಾಂತಿ ಕ್ಷಮೆ ದಯೆ ಹಿಡಿಯಲು ಬೇಕು*
*ಭ್ರಾಂತಿ ಕ್ರೋಧವ ಕಳೆಯಲು ಬೇಕು*
*ಸಂತತ ಸನ್ಮಾರ್ಗದಲಿರಬೇಕು ll 2 ll*
*ಕಾಮ ಕ್ರೋಧವ ತಾ ಬಿಡಬೇಕು*
*ಮಮತಾಹಂಕಾರವ ಕಳೆಯಲು ಬೇಕು*
*ಸೌಮ್ಯರ ಸಂಗದೊಳು ಇರಬೇಕು ll 3 ll*
*ವೇದಶಾಸ್ತ್ರವ ನೋಡಲು ಬೇಕು*
*ಭೋದತತ್ತ್ವ ತಿಳಿಯಲು ಬೇಕು*
*ಮಾಧವನ ಸ್ಮರಣೆ ಮಾಡಲು ಬೇಕು ll 4 ll*
*ತಂದೆ ಕೃಷ್ಣನ ದಯವಿರಬೇಕು*
*ಬಂದುದ ಉಂಡು ಸುಖ ಪಡಬೇಕು*
*ಚಂದಾಗಿ ಜಗದೊಳು ಇರಬೇಕು ll 5 ll*
*-ಶ್ರೀವ್ಯಾಸರಾಜರು*
ಶ್ರೀರಾಜರು ಇಲ್ಲಿ ಕೊಟ್ಟಿರುವ ಬೇಕುಗಳ ವಿಷಯಗಳು ಪ್ರತಿಯೊಬ್ಬನ ಜೀವನದಲ್ಲೂ ನಿತ್ಯವೂ ಹಾಸುಹೊಕ್ಕಾಗಿ ಹಬ್ಬಿರುವ ವಿಷಯಗಳಾಗಿವೆ.  ಇವುಗಳ ಪಾಲನೆಯಿಂದ ಜೀವನ ನೆಮ್ಮದಿ.  ಕುಟುಂಬ - ಸಮಾಜದಲ್ಲಿ ಶಾಂತಿ.  ಅತಿ ಮುಖ್ಯವಾದ ಅವರ ಆಶಯವು ಸದಾ ಜಿಹ್ವೆಯಲ್ಲಿ ಹರಿನಾಮ ಸ್ಮರಣೆ ಇರಬೇಕೆಂಬುದು.  ಇವರೇ ಒಂದು ಕಡೆ -
*ಕೃಷ್ಣ ಕೃಷ್ಣ ಕೃಷ್ಣ ಯೆಂದು ಮೂರು ಬಾರಿ ನೆನೆಯಿರೊ*
*ಸಂತುಷ್ಟನಾಗಿ ಮುಕುತಿಕೊಟ್ಟು ಮಿಕ್ಕ ಭಾರ ಹೊರುವನೋ ll* ಎಂದಿರುವರು.
                        * * * * * *
*ಏನು ಅರಿಯದ ಮೂಢ ಮಾನವನು ನಾನು l - ಶ್ರೀಜ.*
                        * * * * * *
*ಹರಿದಾಸ ಹೃದಯ ಗ್ರಂಥದಿಂದ*