
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
May 30, 2025 at 04:36 AM
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫)
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..."
"ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..."
"ಲೋಕದ ಕಣ್ಣಿಗೆ ರಾಧೆಯೂ ಕೂಡ ..."
"ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ..."
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು..."
ಡಾ ಹೆಚ್ಚೆಸ್ವಿ ಅವರ, ಮನಸೂರೆಗೊಂಡ ಈ ಮಧುರ ಭಾವ ಗೀತೆಗಳನ್ನು ಕೇಳದ, ಗುನುಗುನಿಸದ ಸಾಹಿತ್ಯಾಸಕ್ತ ಕನ್ನಡಿಗರಿಲ್ಲ ಎಂದೇ ಹೇಳಬಹುದು.
ಡಾ ಹೊದಿಗೆರೆ ಶಾನ್ ಭಾಗ್ ವೆಂಕಟೇಶ ಮೂರ್ತಿ(೨೩.೦೬.೧೯೪೪) ಹೆಚ್ಚೆಸ್ವಿ ಎಂದೇ ಸಾರಸ್ವತ ಲೋಕದಲ್ಲಿ ಪರಿಚಿತರು. ಕವಿ, ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ, ಶಿಶು ಸಾಹಿತಿ, ಅನುವಾದಕ, ವಿಮರ್ಶಕ, ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳಿಗೆ ಗೀತೆ, ಸಂಭಾಷಣಾ ರಚನೆಕಾರ... ಹೆಚ್ಚೆಸ್ವಿ ಅವರ ಹಲವು ಮುಖಗಳಿವು!ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸಮಕಾಲೀನ ಸಂದರ್ಭದ ಮುಖ್ಯ ಕವಿ ಎಂದು ಅವರನ್ನು ಗುರುತಿಸಲಾಗಿದೆ.
ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳು. ಅಜ್ಜ ಭೀಮರಾಯರು ಮೃದಂಗ ವಾದಕರು ಹಾಗೂ ನಾಟಕ ಪ್ರಿಯರು. ಹಾಗಾಗಿ ಸಾಹಿತ್ಯ, ಸಂಗೀತದ ಪ್ರೇಮ ಹೆಚ್ಚೆಸ್ವಿ ಅವರಿಗೆ ರಕ್ತಗತವಾಗಿಯೇ ಬಂದದ್ದು .
ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಪ್ರೌಢಶಾಲೆಯ ಕ್ರಾಫ಼್ಟ್ ಟೀಚರಾಗಿ ವೃತ್ತಿ ಆರಂಭಿಸಿದ ಹೆಚ್ಚೆಸ್ವಿ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದವರು. ಮೆಕ್ಯಾನಿಕಲ್ ಇಂಜಿನಿಯರಿಂಗನಲ್ಲಿ ಡಿಪ್ಲೊಮಾ ಪಡೆದರೂ ಕನ್ನಡ ಸಾಹಿತ್ಯವೇ ಅವರನ್ನು ಸೆಳೆದಿದ್ದರಿಂದ ನಂತರದಲ್ಲಿ ಕನ್ನಡ ಎಂ ಎ ಮಾಡಿದರು.
ಕಲ್ಬುರ್ಗಿಯಲ್ಲಿ ನಡೆದ ಎಂಭತ್ತೈದನೇ ಅಖಿಲ ಭ್ಹಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಡಿವಿಜಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರ ಮುಡಿಯಲ್ಲಿವೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ.
೧.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮೊದಲ ಕವನ ಸಂಕಲನದ ಹೆಸರೇನು?
*'ಪರಿವೃತ್ತ'
೨.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಮಹಾ ಪ್ರಬಂಧದ ವಸ್ತು ಯಾವುದು?
*'ಕನ್ನಡದಲ್ಲಿ ಕಥನ ಕವನಗಳು'
೩.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಎರಡು ಕಥಾ ಸಂಕಲನಗಳು ಯಾವುವು?
*'ಬಾನಸವಾಡಿಯ ಬೆಂಕಿ' ಮತ್ತು 'ಪುಟ್ಟಾರಿಯ ಮತಾಂತರ'
೪.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಅನುವಾದಿಸಿದ ಕಾಳಿದಾಸನ ಕಾವ್ಯ ಯಾವುದು?
*'ಋತುಸಂಹಾರ' ವನ್ನು 'ಋತುವಿಲಾಸ' ಎಂದು ಅನುವಾದಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ.
೫.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮಕಥನದ ಹೆಸರೇನು?
*'ಎಚ್ಚೆಸ್ವಿ ಅನಾತ್ಮ ಕಥನ'
೬.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಟಿ ಎನ್ ಸೀತಾರಾಂ ಅವರ ಯಾವ ಧಾರಾವಾಹಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ?
*'ಮುಕ್ತಾ'
೭.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮಹಾ ಕಾವ್ಯ ಯಾವುದು?
* 'ಬುದ್ಧ ಚರಣ'
೮.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಯಾವ ಯಾವ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ?
*ಸಿಂದಬಾದನ ಆತ್ಮಕಥೆ(ಕವನ ಸಂಕಲನ)
*ಹರಿಗೋಲು(ಕವನ ಸಂಕಲನ)
*ಅಗ್ನಿಮುಖಿ( ಕಾದಂಬರಿ)
*ಒಂದು ಸೈನಿಕ ವೃತ್ತಾಂತ( ನಾಟಕ)
*ಹೂವಿನ ಶಾಲೆ( ಮಕ್ಕಳ ಸಾಹಿತ್ಯ)
೯.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ವೈಚಾರಿಕ ಪ್ರಬಂಧ ಸಂಪುಟದ ಹೆಸರೇನು?
* 'ಈ ಮುಖೇನ'
೧೦.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ನಿರ್ದೇಶಿಸಿದ ಸಿನಿಮಾ ಯಾವುದು?
*'ಹಸಿರು ರಿಬ್ಬನ್'
ಸಿ ಬಿ ಶೈಲಾ ಜಯಕುಮಾರ್.
ಚಿತ್ರದುರ್ಗ.
🙏
😂
4