ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄
January 21, 2025 at 09:23 AM
ದೇವೇಂದ್ರ - ಯಕ್ಷನ ಪ್ರಶ್ನೆ
ಒಂದು ಸಾರಿ ದೇವತೆಗಳಿಗೂ ರಾಕ್ಷಸರಿಗೂ ಘೋರವಾದ ಯುದ್ಧವಾಯಿತು. ಪರಮಾತ್ಮನ ಕೃಪೆಯಿಂದ ದೇವತೆಗಳಿಗೇ ಜಯವಾಯಿತು. ಆಗ ದೇವತೆಗಳೆಲ್ಲಾ ಸಭೆ ಮಾಡಿ ಯುದ್ಧದಲ್ಲಿ ಹೋರಾಡಿದವರಿಗೆಲ್ಲಾ ಸನ್ಮಾನ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಅಗ್ನಿ-ವಾಯು ಇತ್ಯಾದಿಯವರಿಗೆ ಹೂವಿನ ಹಾರ ಹಾಕುತ್ತಿದ್ದಾರೆ, ಹೊಗಳುತ್ತಿದ್ದಾರೆ. ದೇವತೆಗಳಿಗೆಲ್ಲಾ ಹಿಡಿಸಲಾರದಷ್ಟು ಸಂತೋಷ. ಆ ದೇವತೆಗಳೇ ಪರಮೇಶ್ವರನನ್ನು ಮರೆತರೆ ಸಾಮಾನ್ಯರು ಏಕೆ ಮರೆಯಬಾರದು! ಅಷ್ಟು ಹೊತ್ತಿಗೆ ಅವರ ಸಭೆ ಎದುರಿಗೆ ಒಂದು ಯಕ್ಷ ಆಕಾಶದವರೆವಿಗೂ ಬೆಳೆದು ನಿಂತಿರುವಂತೆ ಕಂಡಿತು. ಆಗ ದೇವತೆಗಳೆಲ್ಲಾ ಹೆದರಿದರು. ಈ ರಕ್ಕಸರು ಮತ್ತಿನ್ಯಾವ ವೇಷದಲ್ಲಿ ಬಂದಿದ್ದಾರೊ ಏನೋ? ಏನು ಮಾಡುವುದು. ಆಗ ದೇವೇಂದ್ರನು ಹೊಗಳಿಸಿಕೊಳ್ಳುತ್ತಿದ್ದ. ಅಗ್ನಿಯನ್ನು ಕರೆದು ‘ಅಗ್ನಿ ಅದು ಏನು ನಿಂತಿರುವುದು ವಿಚಾರಿಸಿಕೊಂಡು ಬಾ’ ಎಂದು. ಅಗ್ನಿ ಹೆದರಿದ ಏಕೆಂದರೆ ಯಾರಿಗೆ ಅಹಂಕಾರವಿದೆಯೇ ಅವನು ದೇವರನ್ನು ಕಂಡರೂ ದೆವ್ವ ಎನ್ನುತ್ತಾನೆ. ಅಗ್ನಿ ಹತ್ತಿರ ಹೋದ. ಆಗ ಆ ಯಕ್ಷ ‘ಯಾರು ನೀನು?’ ‘ನಾನು ಅಗ್ನಿ ನಿನ್ನಲ್ಲಿ ಏನು ಶಕ್ತಿಯಿದೆ?’ ‘ಈ ಜಗತ್ತನ್ನೆಲ್ಲಾ ಒಂದು ಕ್ಷಣದಲ್ಲಿ ಸುಡಬಲ್ಲೆ.’ ‘ಹೌದಾ ಹಾಗಾದರೆ ಆ ಜ್ವಾಲೆಯಿಂದಲೇ ರಾಕ್ಷಸರನ್ನು ಸುಟ್ಟು ಓಡಿಸಿ ಬಂದೆಯೋ ಬಹಳ ಸಂತೋಷ.’ ಎಂದು ಹುಲ್ಲು ಕಡ್ಡಿ ಹಾಕಿ ‘ಈ ಹುಲ್ಲು ಕಡ್ಡಿ ಸುಡು’ ಎಂದ. ಆ ಅಗ್ನಿಗೆ ಭಗವಂತನು ಕೊಟ್ಟ ದಾಹಕ ಶಕ್ತಿಯನ್ನು ಹಿಂದಕ್ಕೆ ತೆಗೆದುಕೊಂಡ.
ಅಗ್ನಿಯ ಕೈಯಲ್ಲಿ ಒಂದು ಹುಲ್ಲು ಕಡ್ಡಿಯನ್ನು ಸುಡಲಾಗಲಿಲ್ಲ. ವಾಪಾಸು ಹೋದ. ಆಗ ಇಂದ್ರನು ವಾಯುವನ್ನು ಕಳಿಸಿದ. ವಾಯು ಅಂಜುತ್ತಲೇ ಆ ಯಕ್ಷನ ಹತ್ತಿರ ಹೋದ ಆಗ ಯಕ್ಷನೇ ನೀನು ಯಾರು? ನಾನು ವಾಯು ಎಂದ. ನಿನಗೇನು ಶಕ್ತಿಯಿದೆ? ಈ ಜಗತ್ತೆಲ್ಲವನ್ನು ಒಂದು ಕ್ಷಣದೊಡನೆ ಹಾರಿಸಬಲ್ಲೆ. ಬಹಳ ಸಂತೋಷ. ಒಂದು ಹುಲ್ಲು ಕಡ್ಡಿ ಹಾಕಿ, ಇದನ್ನು ಹಾರಿಸು ಎಂದ. ಅವನಲ್ಲಿರುವ ಆ ಶಕ್ತಿಯನ್ನು ಹಿಂದಕ್ಕೆ ತೆಗೆದುಕೊಂಡ. ಆ ವಾಯು ಕೈಲಾಗಲಿಲ್ಲ. ವಾಪಾಸು ಬಂದ. ಅಹಂಕಾರ ಇಳಿಯಿತು. ಆಗ ಇಂದ್ರನೇ ಹೋದ ನಮಸ್ಕರಿಸಿದ. ಆಗ ಯಕ್ಷನೇ ಒಂದು ಸುರದ್ರೂಪಿಯಾದ ಹೆಣ್ಣು ಮಗಳಾಗಿ ಪ್ರತ್ಯಕ್ಷವಾದ. ಅದೇ ‘ಬ್ರಹ್ಮ ವಿದ್ಯಾದೇವಿ ಐಮಾವತಿ ಉಮಾಂ’ ಅಹಂಕಾರ ರಹಿತವಾದ ವಿನಯ ವಿಧೇಯತೆಗೆ ನಿಧಿಯಾದ ಇಂದ್ರನಿಗೆ ಬ್ರಹ್ಮ ವಿದ್ಯೆಯನ್ನು ಬೋಧನೆ ಮಾಡಿತು. ಬಂಧ ನಿವಾರಣೆಯಾಯಿತು. ಆದ್ದರಿಂದ ಎಲ್ಲಾ ಮಾಡುವವನು ಭಗವಂತನೆ. ನಾವು ಅಹಂಕಾರದಿಂದ ನಾನು ಮಾಡುತ್ತೇನೆನ್ನುತ್ತೇವೆ. ಇದನ್ನು ಬಿಡಿಸಲು ಭಗವಂತನು “ತಸ್ಮಾತ್ ಸರ್ವೇಷು ಕಾಲೇಷು” ಎಂದಿದ್ದಾನೆ. ಆಗ ಬಂಧನವಾಗುವುದಿಲ್ಲ. ನಾನು ಏನನ್ನು ಮಾಡುವವನಲ್ಲ. ಎಲ್ಲವನ್ನೂ ಪರಮಾತ್ಮನೇ ಮಾಡುತ್ತಾನೆ ಎನ್ನುವುದೇ ಶ್ಲೋಕದ ಅರ್ಥ.
🙏
❤️
👍
😮
14