ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄
January 31, 2025 at 02:21 AM
ಅಹಂಕಾರದಿಂದ ಅವನತಿ ಹೊಂದಿದ ನಹುಷನ ಕಥೆ:- ಪುರಾಣ ಕಾಲದ ಕಥೆಯೊಂದಿದೆ. ದೇವತೆಗಳ ರಾಜ, ಸ್ವರ್ಗಾಧಿಪತಿ ಇಂದ್ರನಿಗೆ ವೃತ್ರಾಸುರನೆಂಬ ದೈವ ಭಕ್ತ ಅಸುರನ ಜೊತೆ ಮೈತ್ರಿ ಮಾಡಿಕೊಂಡಂತೆ ನಟಿಸಿ, ಅವನ ವಿಶ್ವಾಸ ಗಳಿಸಿ ನಂತರ ಮೋಸದಿಂದ ಕೊಲ್ಲಬೇಕಾಯಿತು. ಹೀಗೆ ದೈವಭಕ್ತನೊಬ್ಬನನ್ನು ವಂಚಿಸಿ ಕೊಂದ ಪಾಪ ಇಂದ್ರನನ್ನು ಸುತ್ತಿ ಅವನು ತನ್ನ ದಿವ್ಯ ತೇಜಸ್ಸನ್ನು ಕಳೆದುಕೊಂಡು ಕಳಾಹೀನನಾದನು. ಆದುದರಿಂದ ತನ್ನ ಪಾಪವನ್ನು ಪರಿಹರಿಸಿಕೊಳ್ಳಲು, ಇಂದ್ರನು ಸ್ವರ್ಗವನ್ನು ತ್ಯಜಿಸಿ ಬೇರಾರಿಗೂ ತಿಳಿಯದಂತೆ ಮಾನಸ ಸರೋವರದ ಕಮಲವೊಂದರಲ್ಲಿ ಸೂಕ್ಷ್ಮ ರೂಪದಲ್ಲಿ ಅಡಗಿಕೊಂಡು ತಪಸ್ಸು ಮಾಡತೊಡಗಿದನು. ಇತ್ತ ಇಂದ್ರನಿಲ್ಲದ ಸ್ವರ್ಗದಲ್ಲಿ ಅರಾಜಕತೆಯುಂಟಾಯಿತು. ಇಂದ್ರನನ್ನು ಹುಡುಕಲು ದೇವತೆಗಳು ಮಾಡಿದ ಪ್ರಯತ್ನ ವಿಫಲವಾಯಿತು. ಮೂರು ಲೋಕಗಳನ್ನು ಸರಿಯಾಗಿ ಆಳಲು ದೇವತೆಗಳೆಲ್ಲ ತಮ್ಮಲ್ಲಿಯೇ ವಿಚಾರಿಸಿ, ಇಂದ್ರನು ಬರುವವರೆಗೆ ಮತೊಬ್ಬ ಅರ್ಹ ರಾಜನನ್ನು ಇಂದ್ರನ ಪದವಿಯಲ್ಲಿ ಕೂಡಿಸಲು ನಿರ್ಧರಿಸಿದರು. ಇಂದ್ರ ಪದವಿಯೇರಲು ಅರ್ಹನಾದ ವ್ಯಕ್ತಿ ಯಾರು ಎಂಬ ಚರ್ಚೆಯಾದಾಗ, ದೇವತೆಗಳಿಗೆ ಕಂಡಿದ್ದು, ನೂರು ಅಶ್ವಮೇಧ ಯಾಗವನ್ನು ಮಾಡಿದ, ವೇದೋಪನಿಷತ್ತುಗಳನ್ನು ಅಭ್ಯಸಿಸಿದ ಮತ್ತು ಜನಾನುರಾಗಿಯಾದ ನಹುಷ ಮಹಾರಾಜ. ಅದರೆ ನಹುಷ ಮಹಾರಾಜ ದೇವತೆಯಾಗಿರಲಿಲ್ಲ. ಅವನೊಬ್ಬ ಭೂಲೋಕದ ಚಂದ್ರವಂಶದಲ್ಲಿ ಜನಿಸಿದ ಮನುಷ್ಯನಾಗಿದ್ದ. ಆದರೆ ದೇವಗುರು ಬೃಹಸ್ಪತಿ ನಹುಷನ ಆಯ್ಕೆಯನ್ನು ಒಪ್ಪಿಕೊಂಡ ಮೇಲೆ ದೇವತೆಗಳು ನಹುಷನನ್ನು ಭೆಟ್ಟಿಯಾಗಿ ತಮ್ಮ ರಾಜನಾಗಿ ಮೂರು ಲೋಕಗಳನ್ನು ಧರ್ಮದಿಂದ ಆಳಲು ಕೇಳಿಕೊಂಡರು. ನಹುಷನಿಗೆ ಆಶ್ಚರ್ಯವಾದರೂ, ದೇವತೆಗಳ ಮಾತಿನಂತೆ ನಡೆಯಲು ಒಪ್ಪಿಕೊಂಡನು. ಒಮ್ಮೆ ಇಂದ್ರ ಪದವಿಗೆ ಏರಿದ ಮೇಲೆ ಅವನಿಗೆ ಅಪಾರವಾದ ಶಕ್ತಿ ಮತ್ತು ಅಧಿಕಾರಗಳು ದೊರೆತವು. ನಹುಷನ ಆಳ್ವಿಕೆಗೆ ಸೂರ್ಯ ಚಂದ್ರರು, ವಾಯು ವರುಣರು, ಯಮ ಮತ್ತು ಅಷ್ಟ ದಿಕ್ಪಾಲಕರಂತಹ ಸ್ವರ್ಗದ ದೇವಾಧಿದೇವತೆಗಳಲ್ಲದೇ, ಅಪ್ಸರೆಯರು, ಯಕ್ಷ ಗಂಧರ್ವರು ಮತ್ತು ಸಕಲ ಲೋಕದ ಜೀವರಾಶಿಗಳೆಲ್ಲರೂ ಒಳಪಟ್ಟಿದ್ದರು. ತನ್ನ ಅಪಾರ ಶಕ್ತಿ ಮತ್ತು ಅಪರಿಮಿತ ಅಧಿಕಾರದಿಂದ ನಹುಷನಿಗೆ ಅಹಂಕಾರ ಬಂದಿತು. ಅವನಿಗರಿವಿಲ್ಲದೇ ಆತ ತನ್ನ ಇಂದ್ರ ಪದವಿ ಶಾಶ್ವತ ಎಂದು ನಂಬ ತೊಡಗಿದ. ಈ ಪದವಿ ಮತ್ತು ಅವನ ಅಧಿಕಾರ ಬಂದಿದ್ದು ಅವನು ಅನುಸರಿಸಿದ ಧರ್ಮ ಮಾರ್ಗದಿಂದ ಬಂದಿದ್ದು ಮತ್ತು ಎಂದಿನ ದಿನ ಆ ಧರ್ಮ ಹೀನವಾಗುತ್ತದೆಯೋ ಅಂದಿನ ದಿನದಿಂದ ಉನ್ನತಿಯಿಂದ ಅವನತಿಯ ಮಾರ್ಗ ಆರಂಭವಾಗುತ್ತದೆ ಎಂದು ಜ್ಞಾನಿಯಾದ ನಹುಷನಿಗೆ ತಿಳಿಯದಿದ್ದುದು ಅಹಂಕಾರದ ಪರದೆಯಿಂದಲೇ ಸರಿ. ಆತನ ಅಹಂಕಾರ ಪರಮಾವಧಿಗೆ ತಲುಪಿ ಇಂದ್ರನ ಪತ್ನಿಯಾದ ಶಚೀದೇವಿಯನ್ನು ಅವನು ಬಯಸಿದಾಗ. ಗುರು ಬೃಹಸ್ಪತಿಯ ಸಲಹೆಯಂತೆ ನಹುಷನಿಗೆ ಪಾಠ ಕಲಿಸಲು ಶಚೀದೇವಿ ಸಪ್ತರ್ಷಿಗಳಿಂದ ಹೊರಲ್ಪಟ್ಟ ಪಲ್ಲಕ್ಕಿಯಲ್ಲಿ ತನ್ನನ್ನು ಕಾಣಲು ಬಾ ಎಂದು ಪ್ರೇರೇಪಿಸುತ್ತಾಳೆ. ಮದದಿಂದ ಅಂಧನಾದ ನಹುಷ ಹಾಗೆಯೇ ಪಲ್ಲಕ್ಕಿಯಲ್ಲಿ ಬರುತ್ತಿರುವಾಗ ಕುಬ್ಜನಾದ ಅಗಸ್ತ್ಯ ಋಷಿಯ ಮಂದಗತಿಗೆ ಬೇಸರಪಟ್ಟು ಕಾಲಿನಿಂದ ಒದ್ದು "ಸರ್ಪ ಸರ್ಪ" ಎಂದು ತೆಗಳಿ ಅವಮಾನಿಸುತ್ತಾನೆ. ಹಾಗೆಯೇ ಅಗಸ್ತ್ಯ ಋಷಿಯಿಂದ ಶಪಿಸಲ್ಪಟ್ಟು ಹೆಬ್ಬಾವಾಗಿ ಮಾರ್ಪಟ್ಟು ಭೂಲೋಕ ಸೇರುತ್ತಾನೆ. ಅತ್ಯಂತ ವಿನಯಶೀಲ ಮತ್ತು ದೈವ ಭಕ್ತನಾದ ನಹುಷ ಮಹಾರಾಜ ಕೂಡ ಅಹಂಕಾರದ ಮಾಯೆಗೆ ಒಳಪಟ್ಟು ತನ್ನ ಪದವಿಯನ್ನು ಕಳೆದುಕೊಂಡು ಅವನತಿ ಹೊಂದಿದ್ದು ಒಂದು ಕಥೆಯಾಯಿತು ° ಪ್ರತಿದಿನ ಪೌರಾಣಿಕ ಕಥೆಗಳನ್ನು ಓದಲು, ಕೇಳಲು WhatsApp follow ಮಾಡಿ👇 https://WhatsApp.oia.link/dinakkondu-adhyatmik-kathe 🙏🙏 ಧನ್ಯವಾದಗಳು 🙏🙏
🙏 ❤️ 😢 16

Comments