
ಗುರುಪ್ರಸಾದ್ ಆಚಾರ್ಯ ಕುಂಜೂರು
February 14, 2025 at 10:27 AM
ಭೂಮಿಯನ್ನಾಳಿದ ಮೊದಲ ರಾಜನ ಕುರಿತಾಗಿ ಮಹಾಭಾರತದಲ್ಲಿ ಬರುವ ಕತೆ...
ಒಮ್ಮೆ ದೇವತೆಗಳೆಲ್ಲರೂ ಪ್ರಜಾಪತಿಯಾದ ಭಗವಾನ್ ವಿಷ್ಣುವಿನ ಬಳಿಗೆ ಹೋಗಿ ಹೇಳಿದರು : “ಭಗವನ್! ಮನುಷ್ಯರಲ್ಲಿ ಎಲ್ಲರಿಗಿಂತಲೂ ಶ್ರೇಷ್ಠವಾದ ಪದವಿಯನ್ನು ಪಡೆದುಕೊಳ್ಳಲು ಅರ್ಹನಾಗಿರುವವನು ಯಾರೆಂಬುದನ್ನು ಹೇಳು.? ”
ದೇವತೆಗಳು ಹೀಗೆ ಪ್ರಾರ್ಥಿಸಲಾಗಿ ; ಭಗವಾನ್ ವಿಷ್ಣುವು ಸ್ವಲ್ಪಕಾಲ ಯೋಚಿಸುತ್ತಿದ್ದು, ತನ್ನ ತೇಜಸ್ಸಿನಿಂದ ಒಬ್ಬ ಮಾನಸಪುತ್ರನನ್ನು ಸೃಷ್ಟಿಸಿದನು. ಆ ಪುತ್ರನು 'ವಿರಜಸ' ಎಂಬ ಹೆಸರಿನಿಂದ ವಿಖ್ಯಾತನಾದನು. ವಿರಜಸನು ಲೋಕದ ಪ್ರಭುತ್ವವನ್ನು ಪಡೆದುಕೊಳ್ಳಲು ಇಚ್ಛೆಪಡಲಿಲ್ಲ. ಅವನ ಬುದ್ದಿಯು ಯಾವಾಗಲೂ ಸಂನ್ಯಾಸ ಸ್ವೀಕಾರದಲ್ಲಿಯೇ ಆಸಕ್ತವಾಗಿದ್ದಿತು. ವಿರಜಸನಿಗೆ ' ಕೀರ್ತಿಮಂತ 'ನೆಂಬ ಮಗನು ಹುಟ್ಟಿದನು. ಅವನೂ ಕೂಡ ಪಂಚತತ್ವಗಳಿಂದ ಅತೀತವಾದ ಮೋಕ್ಷಮಾರ್ಗವನ್ನೇ ಅವಲಂಬಿಸಿದನು. ' ಕರ್ದಮ ' ನೆಂಬುವನು ಕೀರ್ತಿಮಂತನ ಮಗ. ಅವನೂ ಮಹಾತಪಸ್ಸಿನಲ್ಲಿಯೇ ನಿರತನಾದನು. ಅನಂಗನೆಂಬುವನು ಕರ್ದಮಪ್ರಜಾಪತಿಯ ಪುತ್ರನು. ಅನಂಗನು ಪ್ರಜೆಗಳ ರಕ್ಷಣೆಯಲ್ಲಿ ಬಹಳ ಸಮರ್ಥನಾಗಿಯೂ, ಸತ್ಪುರುಷನಾಗಿಯೂ, ದಂಡನೀತಿಯಲ್ಲಿ ವಿಶಾರದನಾಗಿಯೂ ಇದ್ದನು. ಅತಿಬಲನೆಂಬುವನು ಅನಂಗನ ಮಗ. ಅವನೂ ಸಹ ನೀತಿಶಾಸ್ತ್ರದಲ್ಲಿ ಮಹಾಪ್ರವೀಣನಾಗಿದ್ದನು. ಅವನು ವಿಶಾಲವಾದ ರಾಜ್ಯವನ್ನು ಪಡೆದುಕೊಂಡನು. ಆದರೆ ಅವನು ಇಂದ್ರಿಯಗಳಿಗೆ ದಾಸನಾಗಿಬಿಟ್ಟನು.
ಮೃತ್ಯುವಿಗೆ ಸುನೀಥಾ ಎಂಬ ಹೆಸರಿನ ಮಾನಸಪುತ್ರಿಯಿದ್ದಳು. ಅವಳು ತನ್ನ ರೂಪ-ಯೌವನ-ಗುಣಗಳಿಂದ ಮೂರು ಲೋಕಗಳಲ್ಲಿಯೂ ವಿಖ್ಯಾತಳಾಗಿದ್ದಳು. ಅವಳು ಅತಿಬಲನಿಂದ 'ವೇನ' ಎಂಬುವನಿಗೆ ಜನ್ಮವನ್ನಿತ್ತಳು. ವೇನನು ರಾಗದ್ವೇಷಗಳಿಂದ ಕೂಡಿದವನಾಗಿ ಪ್ರಜೆಗಳ ಮೇಲೆ ಅಪಚಾರವೆಸಗಲು ಪ್ರಾರಂಭಿಸಿದನು. ಆ ಸಮಯದಲ್ಲಿ ಬ್ರಹ್ಮವಾದಿಗಳಾದ ಋಷಿಗಳು ಮಂತ್ರಪೂರ್ವಕವಾದ ದರ್ಭೆಗಳಿಂದಲೇ ವೇನನನ್ನು ಸಂಹರಿಸಿದರು. ಬಳಿಕ ಋಷಿಗಳೆಲ್ಲರೂ ಸೇರಿ ಮಂತ್ರೋಚ್ಚಾರಣಪೂರ್ವಕವಾಗಿ ವೇನನ ಬಲತೊಡೆಯನ್ನು ಕಡೆದರು. ವೇನನ ತೊಡೆಯನ್ನು ಮಥಿಸಿದುದರ ಪರಿಣಾಮವಾಗಿ ವಿಕಾರವಾದ ಆಕಾರವನ್ನು ಹೊಂದಿದ್ದ ಕುರೂಪಿಯಾದ ಕುಬ್ಜನಾದ ಮನುಷ್ಯನೊಬ್ಬನು ಹುಟ್ಟಿದನು. ಅವನು ಸುಟ್ಟು ಕರುಕಲಾದ ಕಂಬದಂತೆ ಕಾಣುತ್ತಿದ್ದನು. ಕೆಂಗಣ್ಣನಾಗಿದ್ದನು. ತಲೆಯಲ್ಲಿ ಕಪ್ಪಾದ ಕೂದಲುಗಳಿದ್ದುವು. ಅವನು ಹುಟ್ಟಿದೊಡನೆಯೇ ಬ್ರಹ್ಮವಾದಿಗಳಾದ ಋಷಿಗಳು-'ನಿಷೇದ' 'ಕುಳಿತುಕೋ' ಎಂದು ಹೇಳಿದರು.
ಪರ್ವತಗಳನ್ನೂ ಮತ್ತು ವನವನ್ನೂ ಆಶ್ರಯಿಸಿರುವ ಕ್ರೂರಿಗಳಾದ ನಿಷಾದರು ಆ ಮನುಷ್ಯನಿಂದಲೇ ಹುಟ್ಟಿದರು. ವಿಂಧ್ಯಾಚಲನಿವಾಸಿಗಳಾದ ಲಕ್ಷೋಪಲಕ್ಷ ಮ್ಲೇಚ್ಛರೂ ಅವನಿಂದಲೇ ಪ್ರಾದುರ್ಭವಿಸಿದರು.
ಪುನಃ ಬ್ರಹ್ಮವಾದಿಗಳಾದ ಋಷಿಗಳು ಮಂತ್ರಪೂರ್ವಕವಾಗಿ ವೇನನ ಬಲಗೈಯನ್ನು ಕಡೆದರು. ರೂಪಸಂಪತ್ತಿನಿಂದ ಎರಡನೆಯ ಇಂದ್ರನೋ ಎಂಬಂತೆ ಕಾಣುತ್ತಿದ್ದ ಮತ್ತೊಬ್ಬ ಪುರುಷನು ಹುಟ್ಟಿದನು. ಆ ಪುರುಷನು ಕವಚವನ್ನು ಧರಿಸಿದ್ದು, ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದನು. ಬಾಣಸಹಿತವಾದ ಧನುಸ್ಸನ್ನು ಹಿಡಿದಿದ್ದನು. ವೇದ-ವೇದಾಂಗಗಳನ್ನೂ ತಿಳಿದವನಾಗಿದ್ದನಲ್ಲದೇ ಧನುರ್ವೇದದಲ್ಲಿಯೂ ಪಾರಂಗತನಾಗಿದ್ದನು. ಆ ನರಶ್ರೇಷ್ಠನನ್ನು ಸಮಸ್ತವಾದ ದಂಡನೀತಿಗಳೂ ಆಶ್ರಯಿಸಿದುವು. ವೈದಿಕ ಜ್ಞಾನಕ್ಕೆ ನಿಧಿಪ್ರಾಯನಾದ ಶುಕ್ರನು ವೈನ್ಯನಿಗೆ ಪುರೋಹಿತನಾದನು.
ವಾಲಖಿಲ್ಯರೂ ಮತ್ತು ಸರಸ್ವತೀನದಿಯ ತೀರದಲ್ಲಿ ವಾಸಮಾಡುತ್ತಿದ್ದ ಋಷಿಗಳೂ ವೈನ್ಯನಿಗೆ ಮಂತ್ರಿಗಳಾದರು. ಮಹರ್ಷಿಯಾದ ಭಗವಾನ್ ಗರ್ಗನು ವೈನ್ಯನಿಗೆ ಜ್ಯೋತಿಷಿಕನಾದನು. ಪೃಥುರಾಜನು ( ವೈನ್ಯನು ) ಭಗವಾನ್ ವಿಷ್ಣುವಿನಿಂದ ಎಂಟನೆಯವನೆಂದು ಮನುಷ್ಯಲೋಕದಲ್ಲಿ ಪ್ರಸಿದ್ಧನಾದನು.
ಪೃಥುವು ಹುಟ್ಟುವುದಕ್ಕೆ ಮೊದಲೇ ಸೂತ ಮತ್ತು ಮಾಗಧರೆಂಬ ಸ್ತುತಿಪಾಠಕರು ಹುಟ್ಟಿದ್ದರು. ಸೂತ-ಮಾಗಧರ ಸ್ತೋತ್ರಗಳಿಂದ ಪ್ರಸನ್ನನಾದ ಪ್ರತಾಪವಂತನಾದ ವೈನ್ಯನು, ಸೂತನಿಗೆ ಸಾಗರ ಸಮೀಪದ ಪ್ರಾಂತವನ್ನೂ (ಅನೂಪದೇಶವನ್ನೂ ), ಮಾಗಧನಿಗೆ ಮಗಧದೇಶವನ್ನೂ ಬಳುವಳಿಯನ್ನಾಗಿ ಕೊಟ್ಟನು. ಹಿಂದೆ ಭೂಮಿಯು ಹಳ್ಳ-ತಿಟ್ಟುಗಳಿಂದ ಕೂಡಿದ್ದಿತೆಂದೂ ಅದನ್ನು ವೈನ್ಯನು ಸಮತಟ್ಟಾಗಿ ಮಾಡಿದನೆಂದೂ ಕತೆಯಿದೆ. ಭಗವಾನ್ ವಿಷ್ಣು, ದೇವತೆಗಳಿಂದ ಸಹಿತನಾದ ಇಂದ್ರದೇವ, ಋಷಿಗಳು, ಪ್ರಜಾಪತಿಗಳು ಮತ್ತು ಬ್ರಾಹ್ಮಣರು-ಇವರೆಲ್ಲರೂ ಪೃಥುವನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದರು.
ಸಾಕ್ಷಾತ್ ಭೂದೇವಿಯೂ, ನದಿಗಳಿಗೆ ಒಡೆಯನಾದ ಸಾಗರನೂ, ಪರ್ವತಶ್ರೇಷ್ಠನಾದ ಹಿಮವಂತನೂ, ಅನೇಕ ವಿಧವಾದ ರತ್ನಗಳನ್ನು ಬಳುವಳಿಯಾಗಿ ತೆಗೆದುಕೊಂಡು ಬಂದು ವೈನ್ಯನನ್ನು ಸೇವಿಸಿದರು. ಇಂದ್ರನೂ ವೈನ್ಯನಿಗೆ ಅಕ್ಷಯವಾದ ಧನವನ್ನು ಅರ್ಪಿಸಿದನು. ಸುವರ್ಣಮಯ ಪರ್ವತವಾದ ಮಹಾಮೇರುವು ತಾನಾಗಿಯೇ ವೈನ್ಯನ ಬಳಿಗೆ ಬಂದು ಸುವರ್ಣದ ರಾಶಿಯನ್ನೇ ಕಾಣಿಕೆಯನ್ನಾಗಿ ಸಮರ್ಪಿಸಿದನು. ಯಕ್ಷ-ರಾಕ್ಷಸರ ಸ್ವಾಮಿಯಾದ, ಭಗವಾನ್ ಕುಬೇರನು ಧರ್ಮಾರ್ಥಕಾಮಗಳ ನಿರ್ವಹಣೆಗೆ ಸಾಕಾಗುವಷ್ಟು ಧನವನ್ನು ವೈನ್ಯನಿಗೆ ಕೊಟ್ಟನು. ವೈನ್ಯನು ಸ್ಮರಿಸುತ್ತಿದ್ದಂತೆಯೇ ಕೋಟಿ-ಕೋಟಿ ಕುದುರೆಗಳೂ, ರಥಗಳೂ, ಪದಾತಿಸೈನಿಕರೂ ಪ್ರಾದುರ್ಭವಿಸಿದರು.
ವೈನ್ಯನ ರಾಜ್ಯದಲ್ಲಿ ಯಾರಿಗೂ ಮುಪ್ಪು ಬರುತ್ತಿರಲಿಲ್ಲ. ದೇಶದಲ್ಲಿ ಯಾವ ಪದಾರ್ಥಕ್ಕೇ ಆದರೂ ದುರ್ಭಿಕ್ಷವೆಂಬುದಿರಲಿಲ್ಲ. ಮನುಷ್ಯನಿಗೆ ಮಾನಸಿಕ ಚಿಂತೆಯಾಗಲೀ ಶಾರೀರಕ ರೋಗಗಳಾಗಲೀ ಇರುತ್ತಿರಲಿಲ್ಲ.
ರಾಜನ ರಕ್ಷಣಾವ್ಯವಸ್ಥೆಯು ಸಮುಚಿತವಾಗಿದ್ದುದರಿಂದ ವೈನ್ಯನ ರಾಷ್ಟ್ರದಲ್ಲಿ ಸರ್ಪಗಳಿಂದಾಗಲೀ, ಕಳ್ಳರಿಂದಾಗಲೀ ಯಾವ ವಿಧವಾದ ಭಯವೂ ಇರಲಿಲ್ಲ. ಪ್ರಜೆಗಳು ಒಬ್ಬರನ್ನು ಕಂಡರೆ ಮತ್ತೊಬ್ಬರು ಭಯಪಡಬೇಕಾಗಿರಲಿಲ್ಲ.
ವೈನ್ಯರಾಜನು ಸಮುದ್ರಾಭಿಮುಖವಾಗಿ ಹೋಗುತ್ತಿದ್ದಾಗ ನೀರುಗಳು ಸ್ತಂಭಿತವಾಗಿ (ಘನೀಭೂತವಾಗಿ) ಅವನ ರಥವು ಮುಂದೆ ಹೋಗಲು ಹಾದಿಮಾಡಿಕೊಡುತ್ತಿದ್ದುವು. ಅಡ್ಡಲಾಗಿ ಪರ್ವತಗಳೇನಾದರೂ ಸಿಕ್ಕಿದರೆ ಪರ್ವತಗಳೇ ಎರಡು ಭಾಗಗಳಾಗಿ ವೈನ್ಯನ ರಥವು ಮುಂದೆ ಹೋಗಲು ಹಾದಿಯನ್ನು ನೀಡುತ್ತಿದ್ದುವು. ಅವನ ರಥದ ಮೇಲಿದ್ದ ಧ್ವಜವೂ ಕೂಡ ಯಾವುದೇ ಕಾರಣದಿಂದಲೂ ಭಗ್ನವಾಗುತ್ತಿರಲಿಲ್ಲ. ವೈನ್ಯನು ಗೋರೂಪಳಾದ ಭೂದೇವಿಯಲ್ಲಿ ಹದಿನೇಳು ವಿಧವಾದ ಧಾನ್ಯಗಳನ್ನು ಕರೆದನು. ಯಕ್ಷ-ರಾಕ್ಷಸ-ನಾಗರುಗಳಲ್ಲಿ ಯಾರಿಗೆ ಯಾವ ವಸ್ತುಗಳಲ್ಲಿ ಅಪೇಕ್ಷೆಯೋ- ಆಯಾ ವಸ್ತುಗಳನ್ನೇ ವೈನ್ಯನು ಗೋರೂಪಳಾದ ಭೂಮಿಯಿಂದ ಕರೆದು ಕೊಡುತ್ತಿದ್ದನು. ಮಹಾತ್ಮನಾದ ವೈನ್ಯನು ಲೋಕದಲ್ಲಿ ಧರ್ಮಕ್ಕೆ ಪ್ರಾಧಾನ್ಯವನ್ನು ಪ್ರತಿಷ್ಠಾಪಿಸಿದನು. ಅವನ ಆಡಳಿತಕಾಲದಲ್ಲಿ ಪ್ರಜೆಗಳೆಲ್ಲರೂ ಮನೋರಂಜನೆಯನ್ನು (ಸಂತೋಷವನ್ನು ) ಹೊಂದಿದರು. ಆದುದರಿಂದಲೇ ವೈನ್ಯನನ್ನು ರಾಜಾ ಎಂಬ ಹೆಸರಿನಿಂದ ಕರೆಯುತ್ತಿದ್ದರು.
ಬ್ರಾಹ್ಮಣರಿಗೆ ಉಂಟಾಗಬಹುದಾದ ತೊಂದರೆಯನ್ನು ನಿವಾರಿಸಿ ಹಿಂಸೆಗಳಿಂದ ಅವರನ್ನು ರಕ್ಷಿಸುವವನಾದುದರಿಂದ ವೈನ್ಯನನ್ನು ಜನರು ಕ್ಷತ್ರಿಯನೆಂದೂ ಕರೆದರು. ವೈನ್ಯನು ಧರ್ಮದ ಮೂಲಕವಾಗಿಯೇ ಈ ಭೂಮಿಯನ್ನು ಖ್ಯಾತಿಗೊಳಿಸಿದುದರಿಂದ ಅವನು ಆಳುತ್ತಿದ್ದ ಈ ಭೂಮಂಡಲವನ್ನು ಬಹುಜನರು 'ಪೃಥಿವೀ' ಎಂದೇ ಕರೆಯತೊಡಗಿದರು.
ಶ್ರೀಮಹಾವಿಷ್ಣುವು ತಾನಾಗಿಯೇ -ಮಹಾರಾಜಾ! ನಿನ್ನನ್ನು ( ನಿನ್ನ ಆಜ್ಞೆಯನ್ನು ) ಅತಿಕ್ರಮಿಸಿ ನಡೆದುಕೊಳ್ಳುವುದಿಲ್ಲ'-ಎಂಬುದಾಗಿ ಹೇಳಿ ವೈನ್ಯನನ್ನು ರಾಜಪದವಿಯಲ್ಲಿ ಸಂಸ್ಥಾಪಿಸಿದನು. ಪೃಥುವು ಮಾಡಿದ ತಪಸ್ಸಿನಿಂದ ಪ್ರಸನ್ನನಾದ ಮಹಾವಿಷ್ಣುವು ರಾಜನನ್ನು ಪ್ರವೇಶಿಸಿದನು. ( ವೈಷ್ಣವೀ ತೇಜಸ್ಸು ಅವನಲ್ಲಿ ಪ್ರವೇಶಿಸಿತು. ) ಈ ಕಾರಣದಿಂದ ಸಮಸ್ತರಾಜರ ಮಧ್ಯದಲ್ಲಿ ಪೃಥುವಿಗೆ ಮಾತ್ರವೇ ಭೂಮಂಡಲದ ಸಕಲಪ್ರಜೆಗಳೂ ದೇವತೆಗಳಿಗೆ ನಮಸ್ಕರಿಸುವಂತೆ ನಮಸ್ಕರಿಸುತ್ತಿದ್ದರು. ಅವನಲ್ಲಿ ಮಹಾವಿಷ್ಣುವಿನ ಆವಿರ್ಭಾವವಿರುವುದರಿಂದ ರಾಷ್ಟ್ರದ ಜನರೆಲ್ಲರೂ ಅವನ ವಶಾನುವರ್ತಿಗಳಾಗಿರುತ್ತಾರೆ.
ಆ ಸಮಯದಲ್ಲಿ ಮಹಾವಿಷ್ಣುವಿನ ಲಲಾಟದಿಂದ ಸುವರ್ಣಮಯವಾದ ಕಮಲವು ಪ್ರಾದುರ್ಭೂತವಾಯಿತು. ಆ ಸುವರ್ಣಕಮಲದಿಂದ ಧೀಮಂತನಾದ ಧರ್ಮನ ಪತ್ನಿಯಾದ ಶ್ರೀದೇವಿಯು ಪ್ರಾದುರ್ಭವಿಸಿದಳು. ಧರ್ಮದಿಂದ ಶ್ರೀದೇವಿಯಲ್ಲಿ ಅರ್ಥವು ಹುಟ್ಟಿತು. ಹೀಗೆ ಪೃಥುವಿನ ರಾಜ್ಯದಲ್ಲಿ ಧರ್ಮ, ಅರ್ಥ ಮತ್ತು ಶ್ರೀ-ಈ ಮೂರೂ ಪ್ರತಿಷ್ಠಿತವಾದುವು. ಧರ್ಮಾದರ್ಥಶ್ಚ ಕಾಮಶ್ಚ-ಎಂಬಂತೆ ಧರ್ಮವನ್ನು ಪರಿಪಾಲಿಸುವುದರಿಂದ ಅರ್ಥ-ಕಾಮಗಳೂ ಸಿದ್ಧಿಸುತ್ತವೆ. ಆದುದರಿಂದ ಪೃಥುವಿನ ರಾಜ್ಯದಲ್ಲಿ ಧರ್ಮಕ್ಕೇ ಪ್ರಾಧಾನ್ಯವಿದ್ದಿತು.
🙏
1