ಗುರುಪ್ರಸಾದ್ ಆಚಾರ್ಯ ಕುಂಜೂರು
February 15, 2025 at 05:20 AM
ಓದಿ ಮುಗಿಸಿದ ಪುಸ್ತಕ : ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು
ಲೇಖಕರು : ಜ್ಯೋತಿ ಪಟ್ಟಾಭಿರಾಮ್
ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಂಡಿರುವ ಜ್ಯೋತಿ ಪಟ್ಟಾಭಿರಾಮ್ ಅವರ ಜೀವನಾನುಭಗಳ ಗುಚ್ಛ ಇದು.. ಅವರಿಗಾದ ಅನುಭಗಳನ್ನ ಅವರು ಕಂಡ ನಾನಾ ಋಷಿಗಳ ದರ್ಶನದ ಬಗೆಗಿನ ಅವರ ಕತೆಗಳನ್ನ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.. ಮಿತ್ರರೋರ್ವರ ಸಲಹೆಯ ಮೇರೆಗೆ ಈ ಪುಸ್ತಕ ಓದಲು ಆರಂಭಿಸಿದೆ.. ಬಹುಶಃ ಅತಿಯಾದ ನಿರೀಕ್ಷೆ ಇಟ್ಟುಕೊಂಡ ಕಾರಣವೋ ಏನೋ.. ಈ ಓದು ನಾನು ನಿರೀಕ್ಷಿಸಿದ ಮಟ್ಟಕ್ಕೆ ಆತ್ಮ ಸಂತೃಪ್ತಿಕೊಡಲಿಲ್ಲ. ಬಹುಶಃ ಇದಕ್ಕೆ ಪ್ರಧಾನ ಕಾರಣ... ಪುಸ್ತಕದ ಆರಂಭದಲ್ಲೇ ಕಾಣಿಸುವ ಒಂದು ಘಟನೆ.. ಬೇರೆ ಬೇರೆ ದೈವೀ ಶಕ್ತಿಯನ್ನು ಆವಾಹಿಸಿಕೊಳ್ಳಬಲ್ಲ ಅತೀಂದ್ರಿಯ ಶಕ್ತಿ ಹೊಂದಿರುವ ವ್ಯಕ್ತಿಯೊಬ್ಬರ ಭೇಟಿಯಾದಾಗ ಲೇಖಕರು ತಮ್ಮ ಗುರುಗಳಾದ ಸ್ವಾಮಿ ರಾಮರನ್ನ ಆವಾಹಿಸಿ ಅನ್ನುತ್ತಾರೆ.. ಅವರು ಸ್ವಾಮಿ ರಾಮರನ್ನ ಆವಾಹಿಸಿಕೊಂಡು ಅವರ ಬಳಿ ಮಾತಾಡುತ್ತಾರೆ.. ಇಂತಹಾ ಒಂದು ಘಟನೆಯ ಉಲ್ಲೇಖ ಸುರೇಶ್ ಸೋಮಪುರ ಅವರ " ಅಘೋರಿಗಳ ನಡುವೆ " ಅನ್ನುವ ಪುಸ್ತಕದಲ್ಲೂ ಬರುತ್ತದೆ.. ಅಲ್ಲಿ ಲೇಖಕರು ಈ ರೀತಿ ಶಕ್ತಿಯನ್ನ ಆವಾಹಿಸುವ ಸಿದ್ಧಿಯನ್ನ ಹೊಂದಿದ ಅಘೋರಿಯ ಬಳಿ ತನ್ನ ಫೋಟೋಗ್ರಾಫರ್ ಮಿತ್ರನನ್ನ ಆವಾಹಿಸುವಂತೆ ಹೇಳಿ ಫೋಟೋಗ್ರಾಫಿಯ ಬಗ್ಗೆ ಕೇಳಿದಾಗ ಆತ ತಬ್ಬಿಬ್ಬಾಗುತ್ತಾನೆ.. ಅಂದರೆ ಯಾವುದೇ ಒಬ್ಬಾತ ಪ್ರಸಿದ್ಧ ವ್ಯಕ್ತಿಯ ಆವಾಹನೆಯಾದಾಗ ಅದೇ ರೀತಿಯಾಗಿ ಮಾತನಾಡುವ ಸಿದ್ಧಿ ಒಂದು ಬಗೆಯ ಸಮ್ಮೋಹಿತರನ್ನಾಗಿಸುವ ತಂತ್ರ... ಸಾಮಾನ್ಯವಾಗಿ ಆ ಸಮಯದಲ್ಲಿ ಆಧ್ಯಾತ್ಮಿಕ ಪ್ರಶ್ನೆಗಳೇ ಮಾತನಾಡುವ ಕಾರಣ ಸರಳವಾಗಿ ನಮ್ಮನ್ನ ಸಮ್ಮೋಹನಗೊಳಿಸಬಹುದು ಎನ್ನುವುದನ್ನ ಸುರೇಶ್ ಸೋಮಪುರ ಅವರು ಸೊಗಸಾಗಿ ವಿವರಿಸಿದ್ದ ಕಾರಣ ಅದೇ ರೀತಿಯ ಘಟನೆ ಇಲ್ಲಿ ನಡೆಯುತ್ತದೆ ಮತ್ತು ಲೇಖಕರು ಅದನ್ನ ಅಚ್ಚರಿಯಿಂದ ದಾಖಲಿಸುತ್ತಾರೆ.. ( ಇದು ನಿಜವೂ ಆಗಿರಬಹುದು ಆ ರೀತಿ ಆಗಲು ಸಾಧ್ಯವೇ ಇಲ್ಲ ಅನ್ನುವಂತೆ ಹೇಳುವುದೂ ಕಷ್ಟವೇ ಕಾರಣ ಇದು ನಂಬಿಕೆ ಸಂಬಂಧಪಟ್ಟ ವಿಚಾರ ಅಲ್ವೇ )
ಇಂತಹಾ ಅನೇಕ ಅನುಭವಗಳು, ಅನೇಕ ಋಷಿಗಳು ನಮ್ಮ ನಿಮ್ಮ ನಡುವಿನ ಜನಸಾಮಾನ್ಯರಂತೆ ಇವರಿಗೆ ಕಾಣಿಸಿಕೊಂಡ ಘಟನೆಗಳನ್ನ ಉಲ್ಲೇಖ ಮಾಡುತ್ತಾರೆ. ಗುರುಕೃಪೆ ಇವರ ಮೇಲಿರುವುದು ಅವರ ಅನುಭವ ಆಧಾರದಲ್ಲಿ ಬಹುವಾಗಿ ಎದ್ದು ಕಾಣಿಸುತ್ತದೆ.. ಅಂತಹಾ ಅನೇಕ ಸಂಗತಿಗಳು ನಮ್ಮನ್ನ ವಿಸ್ಮಯರನ್ನಾಗಿಸುತ್ತದೆ.. ಆದರೆ ಪುಸ್ತಕದ ಶೀರ್ಷಿಕೆಯಲ್ಲಿರುವಂತೆ ನಮಗೆ ಹಿಮಾಲಯದ ಋಷಿಗಳ ಸಂದೇಶವೇನಾದರೂ ದಕ್ಕುತ್ತದೆಯೇ ಅಂದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ... ಕಾರಣ ಇಲ್ಲಿ ಅನುಭಗಳಿವೆಯೇ ಹೊರತು ಓದುಗನಿಗೆ ಸಂದೇಶ ಇಲ್ಲ... ಬಹುಶಃ ಇದನ್ನ ನಾವು ಗುರು ಮುಖೇನವೇ ಪಡೆಯಬೇಕೇನೋ.. ಒಟ್ಟಿನಲ್ಲಿ ನಂಬಿಕೆ ಇದ್ದಲ್ಲಿ ವಿಸ್ಮಯಗೊಳಿಸುವ ಓದು..
👍
1