ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 1, 2025 at 07:08 AM
1-6-2025 ಆದಿತ್ಯವಾರದ ಹವಾಮಾನ ಮುನ್ಸೂಚನೆ.
ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಮಳೆ ಕಡಿಮೆ ಆಗಿದ್ದು ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗಿತ್ತು.ಮಲೆನಾಡಿನ ಕೆಲವೆಡೆ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ - ಬಿಸಿಲಿನ ವಾತಾವರಣ ಮುಂದುವರೆಯಲಿದೆ. ಹಗಲು ಅಲ್ಲಲ್ಲಿ ಸೀಮಿತ ಪ್ರದೇಶಗಳಲ್ಲಿ ತುಂತುರು ಮಳೆ ಸಾಧ್ಯತೆ ಇದೆ. ಸಂಜೆಯ ನಂತರ 4 ಜಿಲ್ಲೆಗಳ ತೀರ ಪ್ರದೇಶಗಳ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ. ಗಾಳಿಯ ಪ್ರಭಾವ ಇದ್ದರೇ ಘಟ್ಟಪ್ರದೇಶಗಳ ತನಕ ಮಳೆ ಮುಂದುವರೆಯಬಹುದು. ಜೂನ್ 4 ತನಕ ಸಾಮಾನ್ಯ ಮಳೆ ಮುಂದುವರೆಯಲಿದ್ದು ನಾಳೆ ನಾಡಿದ್ದು ಹಗಲು ಮಳೆ ಬರುವ ಸಾಧ್ಯತೆ ಇದೆ. ಜೂನ್ 5ರಿಂದ ನಂತರ ಮಳೆ ಕಡಿಮೆ ಆಗಲಿದ್ದು ಜೂನ್ 11 ರಿಂದ ಮತ್ತೆ ಸಾಧಾರಣ ಮಳೆ ಆರಂಭವಾಗುವ ಸಾಧ್ಯತೆ ಇದೆ.
ಮಲೆನಾಡು ಜಿಲ್ಲೆಗಳಲ್ಲಿಯೂ ಮಳೆ ಕಡಿಮೆ ಆಗಿದ್ದು ಮೋಡದ ವಾತಾವರಣ - ತುಂತುರು ಮಳೆ ಮುಂದುವರೆಯಬಹುದು. ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಜೂನ್ 2-3 ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನಲ್ಲಿ ಮಳೆ ಪೂರ್ತಿ ಕಡಿಮೆ ಆಗಿದ್ದು ಇವತ್ತು ಬಹುತೇಕ ಒಣಹವೆ ಮುಂದುವರೆಯಬಹುದು. ಈ ಭಾಗದಲ್ಲಿ ಇವತ್ತು ಮಳೆಯ ಮುನ್ಸೂಚನೆ ಇಲ್ಲ. ನಿನ್ನೆಯಂತೆ ಕೆಲವೆಡೆ 1-5mm ತುಂತುರು ಮಳೆಯಾಗಬಹುದು.
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಕೆಲವೆಡೆ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಧಾರವಾಡ ಗದಗ ಹಾವೇರಿ ಬಿಜಾಪುರ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಸಂಜೆ ಅಲ್ಲಲ್ಲಿ ಸಣ್ಣ ಮಳೆಯ ಮುನ್ಸೂಚನೆ ಇದೆ.
ವಾಯುಭಾರಕುಸಿತಗಳಿಂದಾಗಿ ಬೇಗನೆ ಬಂದ ಮುಂಗಾರು ಮೇ ತಿಂಗಳಿನಲ್ಲಿ ದಾಖಲೆ ಮಳೆ ಸುರಿಸಿದ್ದರೂ ಜೂನ್ ಆರಂಭದಲ್ಲಿ ಮುಂಗಾರು ದುರ್ಬಲ ಆಗಬಹುದು. ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯ ಮಳೆ ಮುಂದುವರೆದರೂ ಒಳನಾಡು ಜಿಲ್ಲೆಗಳಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ.
*ಕರ್ನಾಟಕದಲ್ಲಿ ಬೇಸಿಗೆ ಮಳೆ ಮತ್ತು ಮೇ ತಿಂಗಳ ಮಳೆ ಭಾರಿ ಪ್ರಮಾಣದಲ್ಲಿ ಬಂದಿದ್ದು ಈ ವರ್ಷದ ವಿಶೇಷ ದಾಖಲೆ.*
*ರಾಜ್ಯದಲ್ಲಿ ಮೇ ತಿಂಗಳಿನಲ್ಲಿ 245.2mm ಸಾರ್ವಖಾಲಿಕ ದಾಖಲೆ ಮಳೆ ಬಂದಿದ್ದು 82 ವರ್ಷಗಳ ನಂತರ ದಾಖಲೆ ಮಳೆಯಾಗಿದೆ. 1943 ಮೇ 185.9 mm ಮಳೆಯಾಗಿತ್ತು.*
*ಕರಾವಳಿಯಲ್ಲಿ 1918 ರ ನಂತರ ಮೇ ತಿಂಗಳಲ್ಲಿ ಅಧಿಕ ಮಳೆಯಾಗಿದೆ. 1918 ಮೇ 845.2mm ಮಳೆಯಾಗಿದ್ದು ಈ ಬಾರಿ 994.5 mm ಚಾರಿತ್ರಿಕ ದಾಖಲೆ ಮಳೆ ಬಂದಿದೆ. ರಾಜ್ಯದಲ್ಲಿ 1901 ರ ನಂತರ ಜನವರಿ ಯಿಂದ ಮೇ ತನಕ 322.2mm ಮಳೆ ಬಂದಿದ್ದು ಇದೂ ಐತಿಹಾಸಿಕ ದಾಖಲೆ ( ಕೃಪೆ ಉದಯವಾಣಿ )*
👍
🙏
😮
❤️
👏
35