ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
3.6K subscribers
Similar Channels
Swipe to see more
Posts
22-6-2025 ಆದಿತ್ಯವಾರದ ಹವಾಮಾನ ಮುನ್ಸೂಚನೆ. ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಆಗಾಗ ಸಾಮಾನ್ಯ ಮಳೆಯಾಗಿದೆ. ಮಲೆನಾಡು ಉತ್ತರ ಒಳನಾಡಿನ ಅಲ್ಲಲ್ಲಿ ಸಾಮಾನ್ಯ ಮಳೆಯಾಗಿತ್ತು. *ದ.ಕ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಭಾರಿ ಮಳೆ ಸಾಧ್ಯತೆ* ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ದ.ಕ ಉಡುಪಿ. ಉ.ಕ ಜಿಲ್ಲೆಗಳಲ್ಲಿ ಈ ಮೊದಲೇ ಹೇಳಿದಂತೆ ಮಳೆ ಪ್ರಮಾಣ ಜಾಸ್ತಿ ಆಗಲಿದೆ. *ಕರಾವಳಿ ತೀರಪ್ರದೇಶಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.* ಎಲ್ಲಾ ಜಿಲ್ಲೆಗಳಾದ್ಯಂತ ಸಾಧಾರಣ ಮಳೆಯಾಗಲಿದ್ದು ಮುಂದಿನ 2-3 ದಿನ ಉತ್ತಮ ಮಳೆಯಾಗಲಿದ್ದು ನಂತರ ಸಾಮಾನ್ಯ ಮಳೆ ಜೂನ್ 28/29 ತನಕ ಮುಂದುವರೆಯಲಿದೆ. ಮುಂದಿನ 4-5 ದಿನ ಬಿಸಿಲು ಕಡಿಮೆ ಆಗಿ ಮೋಡ ಇರಬಹುದು. ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುನ್ಸೂಚನೆ. ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಇವತ್ತು ಸಾಧಾರಣ ಮಳೆ ಮುನ್ಸೂಚನೆ ಇದೆ.. ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮೋಡ ಮತ್ತು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಾಮರಾಜನಗರ ಮೈಸೂರು ಮಂಡ್ಯ ಬೆಂಗಳೂರು - ಗ್ರಾಮಾಂತರ ತುಮಕೂರು ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುಂದುವರೆಯಲಿದೆ. ಕೊಪ್ಪಳ ರಾಯಚೂರು ಬಾಗಲಕೋಟೆ ಬಿಜಾಪುರ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯ ಗಾಳಿಯ ತಿರುಗುವಿಕೆಯು ಉತ್ತರ ಪ್ರದೇಶ ಸಮೀಪ ಲೋ ಪ್ರೆಷರ್ ಆಗಿ ಮುಂದುವರೆದಿದ್ದು ಮುಂದಿನ 2 ದಿನದಲ್ಲಿ ಶಿಥಿಲ ಆಗಬಹುದು. ಈ ವಾರ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಒಳನಾಡು ಜಿಲ್ಲೆಗಳಲ್ಲಿ ಕಡಿಮೆ ಮಳೆ ಮುಂದುವರೆಯಲಿದೆ.
10-6-2025 ಮಂಗಳವಾರದ ಹವಾಮಾನ ಮುನ್ಸೂಚನೆ. ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಹಗಲು ತುಂತುರು ಮಳೆಯಾಗಿದೆ. ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗಿದ್ದು ಒಳನಾಡು ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನನಂತರ - ರಾತ್ರಿ ಅಲ್ಲಲ್ಲಿ ಮಳೆ ಮುನ್ಸೂಚನೆ ಇದೆ. ಕಾಸರಗೋಡು ದ.ಕ ಉಡುಪಿ ಕರಾವಳಿ ತೀರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಕಾಸರಗೋಡು ಕರ್ನಾಟಕ ಗಡಿಪ್ರದೇಶಗಳಲ್ಲಿ, ಉಡುಪಿ, ಉ.ಕ ಘಟ್ಟಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮಳೆ ಜಾಸ್ತಿಯಾಗಲಿದ್ದು ಜೂನ್ 12ರಿಂದ ಎಲ್ಲಾ ಪ್ರದೇಶಗಳಲ್ಲಿ ಮಳೆಯಾಗಲಿದೆ. ಶಿವಮೊಗ್ಗ ಜಿಲ್ಲೆಯ ಕರಾವಳಿ ಗಡಿಪ್ರದೇಶಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗದ ಉಳಿದ ಪ್ರದೇಶಗಳಲ್ಲಿ, ಚಿಕ್ಕಮಗಳೂರು ಹಾಸನ ಕೊಡಗು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಜೂನ್ 12-14 ತನಕ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ ಮೈಸೂರು ಚಾಮರಾಜನಗರ ಮಂಡ್ಯ ಬೆಂಗಳೂರು,- ಗ್ರಾಮಾಂತರ ಚಿಕ್ಕಬಳ್ಳಾಪುರ ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಇದೆ. ರಾಮನಗರ ಕೋಲಾರ ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಮಳೆಯಾಗಬಹುದು.ನಾಳೆ ನಾಡಿದ್ದು ಉತ್ತಮ ಮಳೆ ಮುಂದುವರೆಯಲಿದೆ. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಜಿಲ್ಲೆಗಳಲ್ಲಿ ಇವತ್ತು ಮಳೆ ಮುಂದುವರೆಯಲಿದೆ. ಬಿಜಾಪುರ ಬಾಗಲಕೋಟೆ ಕೊಪ್ಪಳ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳ ಅಲ್ಲಲ್ಲಿ ರಾತ್ರಿ ಗುಡುಗು ಮಳೆ ಮುನ್ಸೂಚನೆ ಇದೆ.ಜೂನ್ 14 ತನಕ ಮಳೆ ಮುಂದುವರೆಯಬಹುದು. ಬಂಗಾಳ ಕೊಲ್ಲಿಯ ಅಪ್ಪರ್ ಏರ್ ಸರ್ಕ್ಯುಲೇಷನ್ ಕಾರಣದಿಂದ ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮುಂದಿನ ಒಂದೆರಡು ದಿನದಲ್ಲಿ ಮಲೆನಾಡು ಕರಾವಳಿಯಲ್ಲಿ ಮುಂಗಾರು ಚುರುಕಾಗಬಹುದು. ಜೂನ್ 12 ರಿಂದ ಮಳೆ ಆರಂಭವಾಗಿ ಜೂನ್ 18 ತನಕ ನಿರಂತರ ಮಳೆ ಮುಂದುವರಿಯಲಿದ್ದು ನಂತರ ಬಿಸಿಲು ಮತ್ತು ಒಂದೆರಡು ಮಳೆ ಮುಂದುವರೆಯಬಹುದು.ಒಳನಾಡು ಜಿಲ್ಲೆಗಳಲ್ಲಿ ಜೂನ್ 15 ರಿಂದ ಮಳೆ ಕಡಿಮೆ ಆಗಬಹುದು.
9-6-2025 ಸೋಮವಾರದ ಹವಾಮಾನ ಮುನ್ಸೂಚನೆ. ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಸಾಧಾರಣ ಮಳೆಯಾಗಿದೆ. ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ರಾತ್ರಿ ಮಳೆಯಾಗಿದ್ದು ಬೆಳ್ತಂಗಡಿ ತಾ.ನಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಉತ್ತರ ಒಳನಾಡಿನಾದ್ಯoತ ಉತ್ತಮ ಮಳೆಯಾಗಿದೆ. ಮಲೆನಾಡು ದ. ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಸಹಿತ ಕರಾವಳಿ ಜಿಲ್ಲೆಗಳಲ್ಲಿ ಒಂದೆರಡು ಸಾಧಾರಣ ಮಳೆಯ ಮುನ್ಸೂಚನೆ ಇದೆ. ದ.ಕ. ಉಡುಪಿ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಮಳೆ ಮುನ್ಸೂಚನೆ ಇದೆ. ಕಾಸರಗೋಡು ಉ.ಕ ತೀರ ಪ್ರದೇಶಗಳಲ್ಲಿ ಮಳೆಯಾಗಬಹುದು. ಮಳೆ ನಿಧಾನ ವಾಗಿ ಜಾಸ್ತಿಯಾಗುತ್ತಿದ್ದು ಜೂನ್ 11 ರಿಂದ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಒಂದು ವಾರ ಮಳೆ ಮುಂದುವರೆಯಲಿದ್ದು ಉತ್ತಮ ಬಿಸಿಲು ಬರುವ ಸಾಧ್ಯತೆ ಕಡಿಮೆಯಾಗಬಹುದು. ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದೆ 11 ರಿಂದ ನಿರಂತರ ಮಳೆ ಆರಂಭವಾಗಲಿದ್ದು ಒಂದು ವಾರ ಮಳೆ ಮುಂದುವರೆಯಬಹುದು. ದಕ್ಷಿಣ ಒಳನಾಡಿನ ಚಾಮರಾಜನಗರ ಕೋಲಾರ ಬೆಂಗಳೂರು - ಗ್ರಾಮಾಂತರ ತುಮಕೂರು ಚಿತ್ರದುರ್ಗ ಬಳ್ಳಾರಿ ದಾವಣಗೆರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮೈಸೂರು ಮಂಡ್ಯ ರಾಮನಗರ ಚಿಕ್ಕಬಳ್ಳಾಪುರ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಬಹುದು. ನಾಳೆಯಿಂದ ಮಳೆ ಜಾಸ್ತಿಯಾಗುತ್ತಾ ಹೋಗಬಹುದು. ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಬಿಜಾಪುರ ಬಾಗಲಕೋಟೆ ಗದಗ ಜಿಲ್ಲೆಗಳಲ್ಲಿ ನಿನ್ನೆಯ ಹಾಗೆ ಭಾರಿ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಕೊಪ್ಪಳ ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಬಹುದು.ಹವೆ ಬದಲಾದ ಕಾರಣ ಮುಂದಿನ 10 ದಿನ ಮಳೆ ಮುಂದುವರೆಯಲಿದೆ. ಅರಬ್ಬೀಸಮುದ್ರದ ಅಪ್ಪರ್ ಏರ್ ಸರ್ಕ್ಯುಲೇಷನ್ ಕಾರಣದಿಂದ ಮುಂಗಾರು ಮೋಡ ಪ್ರಬಲ ಆಗಲು ಆರಂಭವಾಗುತ್ತಿರುವಾಗ ಬಂಗಾಳ ಕೊಲ್ಲಿಯಲ್ಲಿಯೂ ಗಾಳಿಯ ತಿರುಗುವಿಕೆ ಆರಂಭವಾಗುತ್ತಿದ್ದು ಇದರಿಂದಾಗಿ ದುರ್ಬಲವಾಗಿದ್ದ ಮುಂಗಾರು ತಕ್ಷಣ ಚುರುಕುಗೊಂಡ ಕಾರಣ ಕರ್ನಾಟಕದಲ್ಲಿ ಒಂದು ವಾರ ಇನ್ನೊಮ್ಮೆ ಭಾರಿ ಮಳೆಯ ಮುನ್ಸೂಚನೆ ಇದೆ.
ಕರಾವಳಿ ಪ್ರದೇಶದಲ್ಲಿ ಇವತ್ತಿನಿಂದಲೇ ಮಳೆ ಆರಂಭವಾಗಲಿದ್ದು ರಾಜ್ಯಾಧ್ಯoತ ನಾಳೆಯಿಂದ ಮುಂಗಾರು ಚುರುಕಾಗಿ ಉತ್ತಮ ಮಳೆ ಮುಂದುವರೆಯಲಿದೆ.

ಎರಡು ವಾರಗಳ ಹಿಂದೆ ಕರಾವಳಿ ಭಾಗಕ್ಕೆ ಪ್ರವೇಶ ಪಡೆದ ಮುಂಗಾರು ಆರಂಭದಲ್ಲೇ ಕ್ಷೀಣಗೊಂಡಿತ್ತು. ಅದರ ಪರಿಣಾಮ, ಇತ್ತೀಚಿಗೆ ಮಳೆ ಸುಮಾರು 5 ರಿಂದ 10 ಕಿ.ಮೀ ವ್ಯಾಪ್ತಿಗೆ ಮಾತ್ರ ಸೀಮಿತಗೊಳ್ಳುತ್ತಿದೆ. ಮುಂಗಾರು ಅವಧಿಯಲ್ಲಿ ವಿಶಾಲವಾಗಿ ಮೋಡ ಸೃಷ್ಟಿಯಾಗಿ ಭಾರಿ ಮಳೆಯಾಗುವುದು ವಾಡಿಕೆ. ಆದರೆ ಕಳೆದ ಕೆಲವು ದಿನಗಳಿಂದ ಸ್ಥಳೀಯವಾಗಿ ಮೋಡ ಸೃಷ್ಟಿಯಾಗುತ್ತಿದ್ದು, ಮಳೆಯೂ ಕೆಲವೇ ಭಾಗಗಳಲ್ಲಿ ಮಾತ್ರ ಸುರಿಯುತ್ತಿದೆ. ಉದಾಹರಣೆಗೆ ಐದು ದಿನಗಳ ಹಿಂದೆ ರಾತ್ರಿ ಸುಮಾರು 8ರ ವೇಳೆಗೆ ಕೊಟ್ಟಾರ ಚೌಕಿ, ಕೊಟ್ಟಾರ, ಉರ್ವಸ್ಟೋರ್, ಚಿಲಿಂಬಿ ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ಆದರೆ ಲಾಲ್‌ಬಾಗ್, ಬಳ್ಳಾಲ್‌ಬಾಗ್, ಪಿವಿಎಸ್ ಜಂಕ್ಷನ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ವಾತಾವರಣವೇ ಇರಲಿಲ್ಲ. ಅದೇ ರೀತಿ, ಕೆಲವು ದಿನಗಳ ಹಿಂದೆ ಬಿ.ಸಿ. ರೋಡ್ ಪ್ರದೇಶದಲ್ಲಿದ್ದ ಮಳೆ ಬಂಟ್ವಾಳ ತಾಲೂಕಿನಾದ್ಯಂತ ಸುರಿದಿಲ್ಲ. ಕಡಬ, ಸುಬ್ರಹ್ಮಣ್ಯ, ಬೆಳ್ತಂಗಡಿ ಸುತ್ತಮುತ್ತಲಿನ ಭಾಗದಲ್ಲಿಯೂ ಇದೇ ರೀತಿಯ ವಾತಾವರಣ ಇತ್ತು. ಉಡುಪಿ ನಗರದಲ್ಲಿ ಉತ್ತಮ ಮಳೆ ಸುರಿದರೂ ಹತ್ತಿರದ ಎಂಜಿಎಂ ಪರಿಸರದಲ್ಲಿ ಮಳೆಯೇ ಸುರಿದಿರಲಿಲ್ಲ. ಹಿಂದೆ ಮುಂಗಾರು ಮಳೆ ಎಂದಾಗ ಮೂರು- ನಾಲ್ಕು ದಿನ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿತ್ತು. ಈಗ ಕೆಲವು ವರ್ಷಗಳಿಂದ ಅದರ ರೀತಿಯೇ ಬದಲಾಗಿರುತ್ತದೆ. ಏನು ಕಾರಣ? “ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ರಾಜ್ಯ ಕರಾವಳಿಗೆ ಪ್ರವೇಶ ಪಡೆಯುವ ಮುಂಗಾರು ಈ ಬಾರಿ ವಾಡಿಕೆಗಿಂತ ಎರಡು ವಾರದ ಮುಂಚಿತವಾಗಿ ಮೇ 24ರಂದೇ ಪ್ರವೇಶ ಪಡೆದಿತ್ತು. ಬಳಿಕ ಕೆಲವು ದಿನಗಳ ಕಾಲ ಪ್ರಬಲಗೊಂಡ ಮುಂಗಾರು ಅನಂತರ ಕ್ಷೀಣಗೊಂಡಿತ್ತು. ಇದರ ಪರಿಣಾಮ ವಿಶಾಲವಾಗಿ ಮೋಡ ಸೃಷ್ಟಿಯಾಗುತ್ತಿಲ್ಲ. ಸ್ಥಳೀಯವಾಗಿ ಅಲ್ಲಲ್ಲಿ ಮೋಡ ಸೃಷ್ಟಿಯಾಗಿ ಅಲ್ಲಿ ಮಳೆ ಸುರಿಯುತ್ತಿದೆ. ಇನ್ನು, ನಗರೀಕರಣದ ಹಿನ್ನೆಲೆಯಲ್ಲಿ ಮರಗಳ ಸಂಖ್ಯೆಯೂ ಕ್ಷೀಣಿಸಿದೆ. ವಾಹನಗಳ ಸಂಖ್ಯೆಯೂ ಅಧಿಕಗೊಂಡಿದ್ದು, ವಾತಾವರಣ ಕಲುಷಿತಗೊಂಡಿದೆ. ಇದೂ ಈ ಮಳೆಯ ಏರು ಪೇರಿಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಅಲ್ಲಿಗೆ ಮರಗಳು ಯಾಕಿರಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.ಮೋಡದ ಚಲನೆಯಲ್ಲಿ ಬದಲಾವಣೆ “ಮುಂಗಾರು ಸಮಯದಲ್ಲಿ ಅರಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿ ಕರಾವಳಿ ಭಾಗದ ಭೂಪ್ರದೇಶದ ಕಡೆ ಚಲಿಸಬೇಕು. ಆದರೆ ಇದಕ್ಕೆ ವಿರುದ್ದವಾಗಿ ಶ್ರೀಲಂಕಾ ಮೂಲಕ ಬಂಗಾಲಕೊಲ್ಲಿಯತ್ತ ಚಲಿಸುತ್ತಿದೆ. ನೈಋತ್ಯದಿಂದ ಈಶಾನ್ಯದ ಕಡೆಗೆ ಚಲಿಸಬೇಕಾದ ಮೋಡಗಳು ಉತ್ತರದಿಂದ ದಕ್ಷಿಣದತ್ತ ಚಲಿಸುತ್ತಿದೆ. ಬಂಗಾಲಕೊಲ್ಲಿ, ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡವಿದ್ದ ಕಾರಣ ಅವಧಿಗೂ ಮುನ್ನ ಮುಂಗಾರು ಪ್ರವೇಶ ಪಡೆಯಿತು. ಜೂ.11ರ ಬಳಿಕ ಮುಂಗಾರು ತುಸು ಬಿರುಸುಗೊಳ್ಳುವ ಸಾಧ್ಯತೆ ಇದೆ. ಗಾಳಿಯ ಒತ್ತಡ ಕಡಿಮೆಯಾಗಿ, ಮೋಡ ವಿವಿಧೆಡೆಗೆ ಚಲಿಸದೆ ಒಂದೇ ಕಡೆಯಲ್ಲಿ ಶೇಖರಣೆಯಾಗುತ್ತದೆ. ಇದರಿಂದಾಗಿ ಅಲ್ಲಲ್ಲಿ ಮಾತ್ರ ಮಳೆಯಾಗುತ್ತಿದೆ’ ಎನ್ನುತ್ತಾರೆ ಹವಾಮಾನ ವಿಶ್ಲೇಷಕ ಸಾಯಿಶೇಖರ್. ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ವಿಶಾಲವಾಗಿ ಮೋಡ ಸೃಷ್ಟಿಯಾಗಿ ಮಳೆ ಸುರಿಯಬೇಕು. ಆದರೆ ಕರಾವಳಿ ಭಾಗಕ್ಕೆ ಕೆಲವು ದಿನಗಳ ಹಿಂದೆ ಅಪ್ಪಳಿಸಿದ ಮುಂಗಾರು ಕೆಲವು ದಿನ ಕ್ಷೀಣವಾಗಿತ್ತು. ಇದರ ಪರಿಣಾಮ ಸ್ಥಳೀಯವಾಗಿ ಮೋಡ ಸೃಷ್ಟಿಯಾಗಿ ಅಲ್ಲಲ್ಲಿ ಮಾತ್ರ ಮಳೆಯಾಗುತ್ತಿದೆ. ಬುಧವಾರದ ಬಳಿಕ ವಾತಾವರಣ ಬದಲಾಗುವ ನಿರೀಕ್ಷೆ ಇದೆ. ಮುಂಗಾರು ಬಿರುಸು ಪಡೆದ ಬಳಿಕ ಮಳೆಯ ಪ್ರಮಾಣದಲ್ಲಿ ಏರಿಕೆಯಾಗಬಹುದು. – ಸಿ.ಎಸ್. ಪಾಟೀಲ್, ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಭಾಗ ವಿಜ್ಞಾನಿ.