ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
May 30, 2025 at 11:19 AM
ಅಂತರಾಳದಿಂದ ಈ ತಿಂಗಳ ವಿಕ್ರಮ ವಾರಪತ್ರಿಕೆಯಲ್ಲೊಂದು ಲೇಖನವಿದೆ. " ಸುಳ್ಳು ಸುದ್ದಿಗಳು ಮತ್ತು ಸಮಾಜ " ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರಸ್ತುತ ಮಾಧ್ಯಮದಲ್ಲಿ ಬರುವ ಸುಳ್ಳು ಸುದ್ದಿಗಳ ಕುರಿತಾದ ಲೇಖನ. ಇಂಚರ ಜಿ.ಜಿ ಅನ್ನುವವರು ಬರೆದದ್ದು. ಒಳ್ಳೆಯ ಲೇಖನವೇ ಹೌದು. ಆ ಲೇಖನದ ಆರಂಭದ ಪ್ಯಾರಾದಲ್ಲಿ ಸುಳ್ಳು ಮತ್ತು ಸತ್ಯಕ್ಕಿರುವ ಬೆಲೆಯ ಬಗ್ಗೆ ವಿವರಿಸುತ್ತಾ ಅವರು ಹೀಗೆ ಬರೆಯುತ್ತಾರೆ.. " ' ಅಶ್ವತ್ಥಾಮ ಹತಃ ಕುಂಜರಃ ' ಎಂಬ ಯುಧಿಷ್ಠಿರನ ಒಂದು ಮಾತು ಕುರುಕ್ಷೇತ್ರ ಯುದ್ಧದ ರೂಪುರೇಷೆಯನ್ನೇ ಬದಲಾಯಿಸಿತು. ಆಚಾರ್ಯ ದ್ರೋಣರು ಯುದ್ಧದಿಂದ ಕೈಚೆಲ್ಲಿದರೇನೋ ಸರಿ, ಆದರೆ ಇದೇ ಒಂದು ಸುಳ್ಳಿಗೆ ಯುಧಿಷ್ಠಿರನ ರಥ ನೆಲಕ್ಕೆ ತಗ್ಗಿತು ಎಂದು ಕೇಳಿದ್ದೇವೆ. ಕೊನೆಗೆ ಆತನಿಗೆ ನರಕ ದರ್ಶನವೂ ಆಯಿತು. ಸತ್ಯಕ್ಕೆ ಸಾವಿಲ್ಲ ಎಂಬುದು ಕಾಲಕಾಲದಲ್ಲೂ ಎಷ್ಟೇ ನಿಜವಾದರೂ ಸುಳ್ಳಿನ ವೇಗೋತ್ಕರ್ಷದ ಮುಂದೆ ಸತ್ಯ ಕುಂಟುತ್ತಲೇ ಸಾಗಿದೆ. " ' ಅಶ್ವತ್ಥಾಮ ಹತಃ ಕುಂಜರಃ ' ಅನ್ನುವ ಘಟನೆಯನ್ನ ಅನೇಕರು ಉದಾಹರಿಸುತ್ತಾ ಯುಧಿಷ್ಠಿರನ ರಥ ಕೆಳಕ್ಕೆ ಜಗ್ಗಿತು.. ಅಂತ ಹೇಳುತ್ತಾರೆ.. ವಾಸ್ತವದಲ್ಲಿ ಭೀಮ ಆ ಹೊತ್ತಿಗೆ ಅಶ್ವತ್ಥಾಮ ಎನ್ನುವ ಆನೆಯನ್ನ ಕೊಂದಿರುತ್ತಾನೆ. ಆ ದೃಷ್ಠಿಯಲ್ಲಿ ನೋಡುವುದಾದರೆ ಯುಧಿಷ್ಠಿರ ಸುಳ್ಳನ್ನೇನೂ ಹೇಳಲಿಲ್ಲ. ಕೆಲವೊಂದು ಆವೃತ್ತಿಯಲ್ಲಿ ಕುಂಜರಃ ಅನ್ನುವುದನ್ನು ಮೆಲ್ಲನೆ ಹೇಳಿದ ಅಂತಿದೆ. ಕೆಲವೆಡೆ ಕುಂಜರಃ ಅನ್ನುವ ಶಬ್ದ ಉಚ್ಚರಿಸುವಾಗ ಕೃಷ್ಣ ಪಾಂಚಜನ್ಯ ಊದಿದ ಅಂತಿದೆ... ಅದೇನಿದ್ದರೂ ಉಚ್ಚರಿಸಿದ ಶಬ್ದಗಳ ಸಮೂಹ ಸುಳ್ಳಲ್ಲ... ಕೇಳುಗನಿಗೆ ಯಾವ ರೀತಿಯಲ್ಲಿ ಕೇಳಿಸಿತು ಅನ್ನುವುದರ ಮೇಲೆ ನನ್ನ ಸತ್ಯಸಂಧತೆ ನಿರೂಪಿತವಾಗುವುದಲ್ಲವಲ್ಲ.. ಧರ್ಮರಾಯ ತಪ್ಪು ಮಾಡಿದ ಅನ್ನುವುದಕ್ಕೆ ಪ್ರಮಾಣವಾಗಿ ಜನರು ಸ್ವೀಕರಿಸುವುದು ಆತನ ರಥ ನೆಲಕ್ಕೆ ತಾಗಿತು ಅನ್ನುವ ವಿಚಾರವನ್ನ... ಆದರೆ ಸತ್ಯವಾಕ್ಯವನ್ನ ಉಚ್ಚರಿಸಿಯೂ ನೆಲಕ್ಕೆ ಕುಸಿಯುವ ಕ್ರಿಯೆಯನ್ನ ಹೇಗೆ ಸಮನ್ವಯ ಮಾಡುವುದು..? ಅದಕ್ಕೆ ಕೆಲವೊಂದು ವಿದ್ವಾಂಸರ ವಿವರಣೆ ಸೊಗಸಾಗಿದೆ.. ಏನೆಂದರೆ... ಧರ್ಮಜ 'ಅಶ್ವತ್ಥಾಮ ಹತಃ ಕುಂಜರಃ' ಅಂತ ಸುಳ್ಳು ಹೇಳಿದುದಕ್ಕಾಗಿ ಆತನ ರಥ ನೆಲಕ್ಕೆ ಕುಸಿಯಲ್ಪಟ್ಟದ್ದಲ್ಲ... ಬದಲಿಗೆ ಕೃಷ್ಣನ ಮಾತನ್ನು ಕೇಳದೆ ಇದ್ದ ಕಾರಣಕ್ಕೆ ಅಂತ... ಅಂದರೆ ಕೃಷ್ಣ ಯಾವುದರಿಂದ ಲೋಕ ಹಿತವೆಂದು ತಿಳಿದುಕೊಂಡು ಧರ್ಮಜನ ಜತೆ ಈ ರೀತಿ ಮಾಡು ಅಂದನೋ ಅದನ್ನ ನೆರವೇರಿಸುವಲ್ಲಿ ಹಿಂಜರಿದ ಅನ್ನುವ ಕಾರಣಕ್ಕೆ.. ನರಕ ದರ್ಶನವೂ ಕೃಷ್ಣನನ್ನ ಅನುಮಾನಿಸಿದ ಕಾರಣಕ್ಕಾಗಿ ಆಯಿತು ಅಂತ.. ಇದು ವೈಯಕ್ತಿಕವಾಗಿ ನನಗೂ ಹಿಡಿಸಿತ್ತು.. ಯಾಕೆಂದರೆ ಯಾವುದೋ ಒಬ್ಬಾತ ನಿರಪರಾಧಿಯನ್ನ ಕಳ್ಳರು ದರೋಡೆ ಮಾಡುವ ಸಲುವಾಗಿ ಹುಡುಕುತ್ತಾ ಬಂದಾಗ ನಾನು ಸತ್ಯವನ್ನೇ ಹೇಳುತ್ತೇನೆ ಎಂದು ಆತ ಹೋದ ದಾರಿಯನ್ನ ತೋರಿಸುವುದರಿಂದ ಉಂಟಾಗುವ ಪುಣ್ಯಸಂಪಾದನೆಗಿಂತ ಆ ಕಾಲಕ್ಕೆ ಸುಳ್ಳನ್ನಾಡಿದರೇನೇ ಅಧಿಕ ಪುಣ್ಯ ಪ್ರಾಪ್ತಿ.. ಹಾಗಿರುವಾಗ ಧರ್ಮಜನ ರಥ ನೆಲಕ್ಕೆ ಕುಸಿಯಲೂ ಕೂಡಾ ಕೃಷ್ಣ ನಿರ್ಣಯದ ಮೇಲಿನ ಅನುಮಾನವೇ ಕಾರಣ ಹೊರತು ಆಡಿದ ಮಾತು ಕಾರಣವಾಗಿರಲಿಕ್ಕಿಲ್ಲ ಅಲ್ವೇ... ಜನರೂ ಅ ನೆಲೆಯಲ್ಲೇ ಈ ಪ್ರಕರಣವನ್ನ ನೋಡಲು ಆರಂಭಿಸಿದರೆ ಪ್ರಕರಣವೊಂದರ ನಿಜವಾದ ಆಯಾಮ ತಿಳಿದು ಪ್ರಚಾರದಲ್ಲಿರುವ ದೃಷ್ಟಿಕೋನದಿಂದ ವಿಭಿನ್ನವಾಗಿ ನೋಡುವುದು ಸಾಧ್ಯ..ಬಹುಷಃ ಅದೇ ನಿಜವಾದ ಸತ್ಯದರ್ಶನವಾದೀತು ಅಲ್ವೇ.
👌 1

Comments