ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
June 11, 2025 at 02:29 AM
ಎರಡು ವಾರಗಳ ಹಿಂದೆ ಕರಾವಳಿ ಭಾಗಕ್ಕೆ ಪ್ರವೇಶ ಪಡೆದ ಮುಂಗಾರು ಆರಂಭದಲ್ಲೇ ಕ್ಷೀಣಗೊಂಡಿತ್ತು. ಅದರ ಪರಿಣಾಮ, ಇತ್ತೀಚಿಗೆ ಮಳೆ ಸುಮಾರು 5 ರಿಂದ 10 ಕಿ.ಮೀ ವ್ಯಾಪ್ತಿಗೆ ಮಾತ್ರ ಸೀಮಿತಗೊಳ್ಳುತ್ತಿದೆ. ಮುಂಗಾರು ಅವಧಿಯಲ್ಲಿ ವಿಶಾಲವಾಗಿ ಮೋಡ ಸೃಷ್ಟಿಯಾಗಿ ಭಾರಿ ಮಳೆಯಾಗುವುದು ವಾಡಿಕೆ. ಆದರೆ ಕಳೆದ ಕೆಲವು ದಿನಗಳಿಂದ ಸ್ಥಳೀಯವಾಗಿ ಮೋಡ ಸೃಷ್ಟಿಯಾಗುತ್ತಿದ್ದು, ಮಳೆಯೂ ಕೆಲವೇ ಭಾಗಗಳಲ್ಲಿ ಮಾತ್ರ ಸುರಿಯುತ್ತಿದೆ. ಉದಾಹರಣೆಗೆ ಐದು ದಿನಗಳ ಹಿಂದೆ ರಾತ್ರಿ ಸುಮಾರು 8ರ ವೇಳೆಗೆ ಕೊಟ್ಟಾರ ಚೌಕಿ, ಕೊಟ್ಟಾರ, ಉರ್ವಸ್ಟೋರ್‌, ಚಿಲಿಂಬಿ ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ಆದರೆ ಲಾಲ್‌ಬಾಗ್‌, ಬಳ್ಳಾಲ್‌ಬಾಗ್‌, ಪಿವಿಎಸ್‌ ಜಂಕ್ಷನ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ವಾತಾವರಣವೇ ಇರಲಿಲ್ಲ. ಅದೇ ರೀತಿ, ಕೆಲವು ದಿನಗಳ ಹಿಂದೆ ಬಿ.ಸಿ. ರೋಡ್‌ ಪ್ರದೇಶದಲ್ಲಿದ್ದ ಮಳೆ ಬಂಟ್ವಾಳ ತಾಲೂಕಿನಾದ್ಯಂತ ಸುರಿದಿಲ್ಲ. ಕಡಬ, ಸುಬ್ರಹ್ಮಣ್ಯ, ಬೆಳ್ತಂಗಡಿ ಸುತ್ತಮುತ್ತಲಿನ ಭಾಗದಲ್ಲಿಯೂ ಇದೇ ರೀತಿಯ ವಾತಾವರಣ ಇತ್ತು. ಉಡುಪಿ ನಗರದಲ್ಲಿ ಉತ್ತಮ ಮಳೆ ಸುರಿದರೂ ಹತ್ತಿರದ ಎಂಜಿಎಂ ಪರಿಸರದಲ್ಲಿ ಮಳೆಯೇ ಸುರಿದಿರಲಿಲ್ಲ. ಹಿಂದೆ ಮುಂಗಾರು ಮಳೆ ಎಂದಾಗ ಮೂರು- ನಾಲ್ಕು ದಿನ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿತ್ತು. ಈಗ ಕೆಲವು ವರ್ಷಗಳಿಂದ ಅದರ ರೀತಿಯೇ ಬದಲಾಗಿರುತ್ತದೆ. ಏನು ಕಾರಣ? “ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ರಾಜ್ಯ ಕರಾವಳಿಗೆ ಪ್ರವೇಶ ಪಡೆಯುವ ಮುಂಗಾರು ಈ ಬಾರಿ ವಾಡಿಕೆಗಿಂತ ಎರಡು ವಾರದ ಮುಂಚಿತವಾಗಿ ಮೇ 24ರಂದೇ ಪ್ರವೇಶ ಪಡೆದಿತ್ತು. ಬಳಿಕ ಕೆಲವು ದಿನಗಳ ಕಾಲ ಪ್ರಬಲಗೊಂಡ ಮುಂಗಾರು ಅನಂತರ ಕ್ಷೀಣಗೊಂಡಿತ್ತು. ಇದರ ಪರಿಣಾಮ ವಿಶಾಲವಾಗಿ ಮೋಡ ಸೃಷ್ಟಿಯಾಗುತ್ತಿಲ್ಲ. ಸ್ಥಳೀಯವಾಗಿ ಅಲ್ಲಲ್ಲಿ ಮೋಡ ಸೃಷ್ಟಿಯಾಗಿ ಅಲ್ಲಿ ಮಳೆ ಸುರಿಯುತ್ತಿದೆ. ಇನ್ನು, ನಗರೀಕರಣದ ಹಿನ್ನೆಲೆಯಲ್ಲಿ ಮರಗಳ ಸಂಖ್ಯೆಯೂ ಕ್ಷೀಣಿಸಿದೆ. ವಾಹನಗಳ ಸಂಖ್ಯೆಯೂ ಅಧಿಕಗೊಂಡಿದ್ದು, ವಾತಾವರಣ ಕಲುಷಿತಗೊಂಡಿದೆ. ಇದೂ ಈ ಮಳೆಯ ಏರು ಪೇರಿಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಅಲ್ಲಿಗೆ ಮರಗಳು ಯಾಕಿರಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.ಮೋಡದ ಚಲನೆಯಲ್ಲಿ ಬದಲಾವಣೆ “ಮುಂಗಾರು ಸಮಯದಲ್ಲಿ ಅರಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿ ಕರಾವಳಿ ಭಾಗದ ಭೂಪ್ರದೇಶದ ಕಡೆ ಚಲಿಸಬೇಕು. ಆದರೆ ಇದಕ್ಕೆ ವಿರುದ್ದವಾಗಿ ಶ್ರೀಲಂಕಾ ಮೂಲಕ ಬಂಗಾಲಕೊಲ್ಲಿಯತ್ತ ಚಲಿಸುತ್ತಿದೆ. ನೈಋತ್ಯದಿಂದ ಈಶಾನ್ಯದ ಕಡೆಗೆ ಚಲಿಸಬೇಕಾದ ಮೋಡಗಳು ಉತ್ತರದಿಂದ ದಕ್ಷಿಣದತ್ತ ಚಲಿಸುತ್ತಿದೆ. ಬಂಗಾಲಕೊಲ್ಲಿ, ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡವಿದ್ದ ಕಾರಣ ಅವಧಿಗೂ ಮುನ್ನ ಮುಂಗಾರು ಪ್ರವೇಶ ಪಡೆಯಿತು. ಜೂ.11ರ ಬಳಿಕ ಮುಂಗಾರು ತುಸು ಬಿರುಸುಗೊಳ್ಳುವ ಸಾಧ್ಯತೆ ಇದೆ. ಗಾಳಿಯ ಒತ್ತಡ ಕಡಿಮೆಯಾಗಿ, ಮೋಡ ವಿವಿಧೆಡೆಗೆ ಚಲಿಸದೆ ಒಂದೇ ಕಡೆಯಲ್ಲಿ ಶೇಖರಣೆಯಾಗುತ್ತದೆ. ಇದರಿಂದಾಗಿ ಅಲ್ಲಲ್ಲಿ ಮಾತ್ರ ಮಳೆಯಾಗುತ್ತಿದೆ’ ಎನ್ನುತ್ತಾರೆ ಹವಾಮಾನ ವಿಶ್ಲೇಷಕ ಸಾಯಿಶೇಖರ್‌. ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ವಿಶಾಲವಾಗಿ ಮೋಡ ಸೃಷ್ಟಿಯಾಗಿ ಮಳೆ ಸುರಿಯಬೇಕು. ಆದರೆ ಕರಾವಳಿ ಭಾಗಕ್ಕೆ ಕೆಲವು ದಿನಗಳ ಹಿಂದೆ ಅಪ್ಪಳಿಸಿದ ಮುಂಗಾರು ಕೆಲವು ದಿನ ಕ್ಷೀಣವಾಗಿತ್ತು. ಇದರ ಪರಿಣಾಮ ಸ್ಥಳೀಯವಾಗಿ ಮೋಡ ಸೃಷ್ಟಿಯಾಗಿ ಅಲ್ಲಲ್ಲಿ ಮಾತ್ರ ಮಳೆಯಾಗುತ್ತಿದೆ. ಬುಧವಾರದ ಬಳಿಕ ವಾತಾವರಣ ಬದಲಾಗುವ ನಿರೀಕ್ಷೆ ಇದೆ. ಮುಂಗಾರು ಬಿರುಸು ಪಡೆದ ಬಳಿಕ ಮಳೆಯ ಪ್ರಮಾಣದಲ್ಲಿ ಏರಿಕೆಯಾಗಬಹುದು. – ಸಿ.ಎಸ್‌. ಪಾಟೀಲ್‌, ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಭಾಗ ವಿಜ್ಞಾನಿ.
👍 🙏 😂 8

Comments